ಹೊತ್ತಿ ಉರಿದ ಟಿಂಬರ್ ಗೋಡಾನ್: 11 ಮಂದಿ ಸಜೀವ ದಹನ

ಹೈದರಾಬಾದ್: ಟಿಂಬರ್ ಗೋಡಾನ್‍ನಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದ್ದು, 11 ಮಂದಿ ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಸಿಕಂದರಾಬಾದ್‍ನಲ್ಲಿನಡೆದಿದೆ.
ಸಿಕಂದರಾಬಾದ್‍ನ ಬೋಯಗೂಡದ ಟಿಂಬರ್ ಗೋಡಾನ್‍ನಲ್ಲಿ ಭೀಕರ ಬೆಂಕಿ ದುರಂತ ನಡೆದಿದೆ. ಸಾವನ್ನಪ್ಪಿದ 11 ಮಂದಿಯನ್ನ ಬಿಹಾರ್ ಮೂಲದವರೆಂದು ಗುರುತಿಸಲಾಗಿದೆ.
ಸಿಕಂದರಾಬಾದ್ನ ರೈಲ್ವೆ ನಿಲ್ದಾಣದ ಸಮೀಪವಿರುವ ಜನನಿಬಿಡ ವಸತಿ ಕಾಲೋನಿಯಲ್ಲಿ ಸುಮಾರು 13 ಕಾರ್ಮಿಕರು ಗೋದಾಮಿನ ಮೇಲಿನ ಮಹಡಿಯಲ್ಲಿ ಮಲಗಿದ್ದು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಟಿಂಬರ್ ಗೋಡಾನ್ ನಲ್ಲಿ ಸಾಕಷ್ಟು ಮರದ ದಿಮ್ಮಿಗಳೂ ಹಾಗೂ ಉರುವಲುಗಳನ್ನ ಹೆಚ್ಚಾಗಿ ಸಂಗ್ರಹಿಸಲಾಗಿತ್ತು. ಹೀಗಾಗಿ ಬೆಂಕಿ ಬಹುಬೇಗ ಹರಡಿದ್ದು, ಕಾರ್ಮಿಕರು ಎಷ್ಟೇ ಪ್ರಯತ್ನ ಪಟ್ಟರೂ ಬೆಂಕಿಯ ತೀವ್ರತೆಯನ್ನ ತಡೆಯಲು ಸಾಧ್ಯವಾಗಲಿಲ್ಲ.
ಎಂಟು ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿದ್ದು, ಸುಮಾರು 3 ಗಂಟೆಗಳ ಬಳಿಕ ಬೆಂಕಿಯನ್ನ ಹತೋಟಿಗೆ ತರಲಾಯಿತು. ಇದುವರೆಗೂ 11 ಶವಗಳನ್ನು ಹೊರ ತೆಗೆಯಲಾಗಿದೆ. ಸಂಪೂರ್ಣ ಸುಟ್ಟು ಕರಕಲಾಗಿರುವ ಮೃತದೇಹಗಳ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಬಚಾವಾಗಿದ್ದು ಆತನನ್ನ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ರಾಜ್ಯ ಸಚಿವ ತಲಸಾನಿ ಶ್ರೀನಿವಾಸ ಯಾದವ್ ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ.
