ಮೆಟ್ರೋರಾಜಕೀಯರಾಜ್ಯರಾಷ್ಟ್ರೀಯಸುದ್ದಿ

ಹೆಚ್ ಡಿ ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ ಮಾಡಿದ ನ್ಯಾಯಮೂರ್ತಿ ಫಾಲಿ ಎಫ್ ನಾರಿಮನ್

ನವದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೀವನ ಆಧರಿಸಿ ಹಿರಿಯ ಪತ್ರಕರ್ತ ಸುಗತಾ ಶ್ರೀನಿವಾಸರಾಜು ಬರೆದಿರುವ ‘ಫರೋಸ್ ಇನ್ ಎ ಫೀಲ್ಡ್: ದಿ ಅನ್ಎಕ್ಸ್ಫ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡʼ (Furrows in a Field: The Unexplored Life of H.D. Deve Gowda) ಕೃತಿಯನ್ನು ಹೆಸರಾಂತ ನ್ಯಾಯವಾದಿ ಫಾಲಿ ಎಫ್ ನಾರಿಮನ್, ದೇವೇಗೌಡರ ಸಮ್ಮುಖದಲ್ಲಿ ಆನ್ಲೈನ್ ವೇದಿಕೆ ಮೂಲಕ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ನಾರಿಮನ್ , ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಮಜಲುಗಳನ್ನು ಮೆಲುಕು ಹಾಕಿದರು. ಮುಖ್ಯವಾಗಿ ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿದ್ದ ಕೃಷ್ಣಾ ಮತ್ತು ಕಾವೇರಿ ಕೊಳ್ಳಗಳ ಜಲವಿವಾದಗಳ ಬಗ್ಗೆ ಗೌಡರು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಉಲ್ಲೇಖಸಿದರು.

60 ವರ್ಷಗಳ ಸುದೀರ್ಘ ರಾಜಕೀಯ ಜೀವನವುಳ್ಳ ದೇವೇಗೌಡರನ್ನು ಪುಸ್ತಕದಲ್ಲಿ ದೊಡ್ಡ ಜೀವ ಎಂದು ಕರೆಯಲಾಗಿದೆ. ದೊಡ್ಡ ಜೀವದ ಜತೆ ಸಂಭ್ರಮಿಸುತ್ತಿದ್ದೇವೆ ಎಂದು ಬರೆಯಲಾಗಿದೆ. ಆದರೆ, ಅವರು ತಾವು ರಾಜಕೀಯ ಜೀವನ ಆರಂಭಿಸಿದಾಗ ಅವರಿಗೆ ತಾವೊಬ್ಬ ದೊಡ್ಡ ಜೀವ ಆಗುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಆದರೆ ದೇವೇಗೌಡರು ಹಾಗೆ ಬೆಳೆದು ಸಾಧಿಸಿದರು ಎಂದು ಅಭಿಪ್ರಾಯಪಟ್ಟರು.

1962ರಲ್ಲಿ ಪಕ್ಷೇತರ ಶಾಸಕರಾಗಿ ಗೌಡರು ರಾಜ್ಯ ವಿಧಾನಸಭೆಗೆ ಕಾಲಿಟ್ಟ ಕೂಡಲೇ ಅವರು ಪ್ರಸ್ತಾಪ ಮಾಡಿದ್ದು, ರಾಜ್ಯಕ್ಕೆ ಹಂಚಿಕೆಯಾಗಿರುವ ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ. ಜತೆಗೆ ಒಂದು ನಿರ್ಣಯವನ್ನೂ ಮಂಡಿಸಿದರು. ಅದಾದ ಮೇಲೆ ಕರ್ನಾಟಕ ಸರಕಾರ ಕಾವೇರಿ ಕೊಳ್ಳದ ತನ್ನ ಪಾಲಿನ ನೀರನ್ನು ಸಮರ್ಪಕವಾಗಿ ಬಳಿಸಿಕೊಳ್ಳುವ ನಿರ್ಧಾರ ಕೈಗೊಂಡಿತು ಎಂದು ವಿವರಿಸಿದರು.

ಆ ನಿರ್ಣಯ ಮಂಡಿಸಿ ಗೌಡರು ಮಾಡಿದ ಭಾಷಣವನ್ನು ಉಲ್ಲೇಖಿಸಿದ ನಾರಿಮನ್; ಹಾಸನ, ಮೈಸೂರು, ಕೊಡಗು, ಮಂಡ್ಯ, ಚಿತ್ರದುರ್ಗ, ಬೆಂಗಳೂರು ಮುಂತಾದ ಜಿಲ್ಲೆಗಳ ನೀರಿನ ಬವಣೆಯನ್ನು ಹಾಗೂ ಕಾವೇರಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದರು. ಅವರ ಮಾತುಗಳನ್ನು ಹಿರಿಯ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರುಗಳೆಲ್ಲ ಆಲಿಸಿ ನೀರಿನ ಬಳಕೆ ಬಗ್ಗೆ ನಿರ್ಧಾರ ಕೈಗೊಂಡಿದ್ದರು ಎಂದರು.

ಭಾವುಕರಾದ ಫಾರೂಕ್ ಅಬ್ದುಲ್ಲಾ :

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಗೌಡರು ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅನೇಕ ಸಲ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾಗಿದ್ದೆ. ಅಂತಹ ಕಠಿಣ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಗೌಡರು ನಿರ್ವಹಿಸಿದ ರೀತಿ ಕೆಚ್ಚೆದೆಯಿಂದ ಕೂಡಿತ್ತು ಎಂದರು.

ಆಗ ದೇವೇಗೌಡರು ಜಮ್ಮು ಕಾಶ್ನೀರಕ್ಕೆ ಭೇಟಿ ನೀಡಿದರು. ಅದು ನನ್ನ ಪಾಲಿಗೆ ಹೊಸ ಆರಂಭ. ಆಗ ಗೌಡರ ದೃಢ ನಿರ್ಧಾರದಿಂದ ಅಷ್ಟು ವಿಷಮ ಸ್ಥಿತಿಯಲ್ಲಿದ್ದ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದು ನಾನು ಅಧಿಕಾರಕ್ಕೆ ಬಂದೆ ಎಂದು ಅವರು ಗದ್ಗದಿತರಾದರು.

ಈ ಕಾರಣಕ್ಕೆ ಜಮ್ಮು, ಕಾಶ್ಮೀರ, ಲಡಾಖ್ ಜನರು ಎಂದೆಂದಿಗೂ ದೇವೇಗೌಡರಿಗೆ ಋಣಿಯಾಗಿರುತ್ತಾರೆಂದು ಅವರು ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಹೇಳಿದರು.
ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್, ಗೌಡರು ಮತ್ತು ಕೃತಿಯ ಬಗ್ಗೆ ಮಾತನಾಡಿದರು. ಸಿಪಿಎಂ ಮುಖಂಡ ಸೀತಾರಾಂ ಯೆಚೂರಿಯವರು ಗೌಡರ ಜತೆಗಿನ ತಮ್ಮ ಬಾಂಧವ್ಯವನ್ನು ಮೆಲುಕು ಹಾಕಿದರು. ಲೇಖಕ ಸುಗತಾ ಶ್ರೀನಿವಾಸ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವೇಗೌಡರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ, ಜನರಲ್ ಧಿಲ್ಲೋನ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಶ್ರೀಮತಿ ಚನ್ನಮ್ಮ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು, ಹೀತೈಷಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Spread the love

Related Articles

Leave a Reply

Your email address will not be published. Required fields are marked *

Back to top button