
ಬೆಂಗಳೂರು: ವಿವಿಧ ಕಾರ್ಪೊರೇಟ್ ಕಂಪನಿಗಳ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೋವಿಡ್ ನಿಯಂತ್ರಣದ ಭಾಗವಾಗಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ 40 ಐಸಿಯು ಹಾಸಿಗೆ ಅಳವಡಿಸುವ ಕುರಿತು ತಿಳಿಸಿದರು. ಇದರೊಂದಿಗೆ, ಸಿಎಸ್ ಆರ್ ಕಾರ್ಯಕ್ರಮದಡಿ ಆಸ್ಪತ್ರೆಯಲ್ಲಿ 500 ಎಲ್‍ಪಿಎಂ ಆಕ್ಸಿಜನ್ ಘಟಕವೂ ಸ್ಥಾಪನೆಯಾಗಲಿದೆ.
ಜೊತೆಗೆ, ಯುಎನ್‍ಡಿಪಿ ತಾಂತ್ರಿಕ ನೆರವಿನಲ್ಲಿ ಯೂಯಿಲ್ ಇನ್‍ಫ್ರಾಸ್ಟ್ರಕ್ಚರ್ 50 ಆಕ್ಸಿಜನ್ ಸಾಂದ್ರಕಗಳನ್ನು ದೇಣಿಗೆಯಾಗಿ ನೀಡಿದೆ. 50 ನಾನ್ ಇನ್ವೇಸಿವ್ ಬಿಐಪಿಎಪಿ ವೆಂಟಿಲೇಟರ್ ಗಳನ್ನು ಭಾರತ ಅಮೆರಿಕದ ದಾನಿಗಳು ನೀಡಿದ್ದು, ಅವುಗಳನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಲಾಯಿತು.
ಎಂಬಸ್ಸಿ ಗ್ರೂಪ್, 3ಎಂ, ಸ್ವಿಸ್ ರೇ, ಕ್ಯಾಪಿಟಾಲ್ಯಾಂಡ್ ಹೋಪ್ ಫೌಂಡೇಶನ್, ಆಕ್ಸಾ, ಐಸಿಮ ಹಾಗೂ ಸಿಐಐ ದೇಣಿಗೆ ನೀಡಿದ ಕಂಪನಿಗಳಾಗಿದ್ದು, ಆಕ್ಸಿಜನ್ ಘಟಕವನ್ನು ಸಂಭವ್ ಫೌಂಡೇಶನ್ ಸಹಯೋಗದಲ್ಲಿ ನೀಡಿವೆ. ಕಂಪನಿಗಳ ಪ್ರತಿನಿಧಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹಾಗೂ ನೋಡಲ್ ಅಧಿಕಾರಿ ಡಾ.ಪಿ.ಎಸ್.ಹರ್ಷ ಉಪಸ್ಥಿತರಿದ್ದರು.
ಕಂಪನಿಗಳ ಪ್ರಯತ್ನವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಕಂಪನಿಗಳು ಸರ್ಕಾರದೊಂದಿಗೆ ಕೈ ಜೋಡಿಸಿರುವುದು ಶ್ಲಾಘನೀಯ. ಬೆಂಗಳೂರು ನಗರದಲ್ಲಿರುವವರ ಸ್ವಯಂಸೇವಾ ಮನೋಭಾವ ಹಾಗೂ ನಾಗರಿಕ ಸಹಭಾಗಿತ್ವವನ್ನು ಇದು ಪ್ರತಿಬಿಂಬಿಸಿದೆ ಎಂದರು.
ಸಿಐಐ ಕರ್ನಾಟಕ ವೃತ್ತದ ಅಧ್ಯಕ್ಷ ರಮೇಶ್ ರಾಮದೊರೈ, ಆರೋಗ್ಯ ಇಲಾಖೆ ಮತ್ತು ಪೂರ್ಣ ಬೆಂಬಲ ನೀಡಿದ ನೋಡಲ್ ಅಧಿಕಾರಿ ಡಾ.ಪಿ.ಎಸ್.ಹರ್ಷ ಅವರಿಗೆ ಕೃತಜ್ಞತೆ ಸಲ್ಲಿಸಿದರು. ದೀರ್ಘಕಾಲದವರೆಗೂ ಮೂಲಸೌಕರ್ಯ ಬಲವರ್ಧನೆ ಹಾಗೂ ಸಮಸ್ಯೆ ಪರಿಹಾರಕ್ಕೆ ಸರ್ಕಾರಕ್ಕೆ ಕೈಲಾದ ಬೆಂಬಲ, ನೆರವು ನೀಡಲು ಬದ್ಧರಾಗಿದ್ದೇವೆ ಎಂದು ತಿಳಿಸಿದರು.




