ಪುನೀತ್ ರಾಜ್ಕುಮಾರ್ಗೆ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಕುರಿತು ಕ್ರಮ: ಸಿಎಂ

ಬೆಂಗಳೂರು: ನಟ ದಿವಂಗತ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶುಕ್ರವಾರ ಸಂಜೆ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಪುನೀತ್ ಅವರಿಗೆ ಪದ್ಮಶ್ರೀ ಗೌರವ ನೀಡಬೇಕೆಂಬ ಅಭಿಮಾನಿಗಳ ಅಭಿಲಾಷೆಯಂತೆ ಕ್ರಮ ವಹಿಸಲಾಗುವುದು. ಸದ್ಯ ಪುನೀತ್ ಅವರ ಕುಟುಂಬ ದುಃಖದಲ್ಲಿದ್ದು, ನವೆಂಬರ್ 16 ರ ಕಾರ್ಯಕ್ರಮ ಮುಗಿದ ನಂತರ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ಅಪ್ಪು ಅವರಿಗೆ ಪದ್ಮಶ್ರೀ ನೀಡುವ ವಿಚಾರ ಸರ್ವಸಮ್ಮತವಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪುನೀತ್ ರಾಜ್ ಕುಮಾರ್ ಕನ್ನಡದ ಆಸ್ತಿ . ಅವರನ್ನು ಕಳೆದುಕೊಂಡು ಎಂಟು ದಿನಗಳಾದ ಹಿನ್ನೆಲೆಯಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಲಾಗಿದೆ. ಪುನೀತ್ ಇಲ್ಲವಾಗಿರುವುದು ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ. ಇಡೀ ಕರ್ನಾಟಕದ ಜನತೆ ಕುಟುಂಬದೊಂದಿಗೆ ಇದೆ ಎಂದು ಧೈರ್ಯ ಹೇಳಲಾಗಿದೆ ಎಂದರು.




