ರಾಮನಗರದಲ್ಲಿ ಮಾವು ಸಂಸ್ಕರಣ ಘಟಕ

ರಾಮನಗರ : ಜಿಲ್ಲೆಯ ರೈತರ ಬಹುವರ್ಷದ ಬೇಡಿಕೆಯಾದ ಮಾವು ಸಂಸ್ಕರಣ ಘಟಕಕ್ಕೆ ಕೊನೆಗೂ ಕಾಲ ಕೂಡಿಬಂದಿದೆ. ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಅಂತರಾಷ್ಟ್ರೀಯ ಗುಣಮಟ್ಟದ ಮಾವು ಹಾಗೂ ಇತರೆ ತೋಟಗಾರಿಕೆ ಬೆಳೆಗಳ ಸಂಸ್ಕರಣ ಘಟಕ ತಲೆ ಎತ್ತಲಿದೆ.
ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಸಂಬಂಧ ಇತ್ತೀಚಿಗೆ ಉಪ ಮುಖ್ಯಮಂತ್ರಿಯಾಗಿದ್ದ ಡಾ. ಅಶ್ವಥ್ ನಾರಾಯಣ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ್ದು, ಈ ಯೋಜನೆಯ ಟೆಂಡಡರ್ ಕಾರ್ಯ ಪ್ರಗತಿಯಲ್ಲಿದೆ. ಇದೀಗ ನೂತನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಯೋಜನೆ ಕಾಮಗಾರಿಯನ್ನು ತ್ವರಿತ ಅನುಷ್ಠಾನ ಮಾಡುವುದೇ ಎಂಬುದನ್ನು ಕಾದು ನೋಡಬೇಕಿದೆ.
ಬೈರಾಪಟ್ಟಣ ಗ್ರಾಮದ ಬಳಿ ಇರುವ ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಈ ಘಟಕ ಆರಂಭವಾಗಲಿದ್ದು, ಈಗಾಗಲೇ ಈ ಸಂಬಂಧಪಟ್ಟ ತಾಂತ್ರಿಕ ಹಾಗೂ ಆಡಳಿತಾತ್ಮಕ ಕೆಲಸಗಳು ಆರಂಭಗೊಂಡಿವೆ. ವರ್ಷಕ್ಕೆ ೩ ಲಕ್ಷ ಟನ್ಗಿಂತ ಹೆಚ್ಚು ಮಾವು ಉತ್ಪಾದಿಸುವ ರಾಮನಗರ ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಆರಂಭಿಸಬೇಕು ಎಂಬುದು ಮಾವು ಬೆಳೆಗಾರರ ಬಹುದಿನದ ಬೇಡಿಕೆಯಾಗಿತ್ತು. ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ಮಾವು ಬೆಳೆಯಲಾಗುತ್ತದೆ. ಮಾವಿನ ಸೀಸನ್ನಲ್ಲಿ ಸರಾಸರಿ 400 ಟನ್ ಮಾವು ಇಲ್ಲಿಂದ ಹೊರರಾಜ್ಯಕ್ಕೆ ರವಾನೆಯಾಗುತ್ತದೆ. ಜಿಲ್ಲೆಯಲ್ಲಿರುವ ಮಾವಿನ ಮಾರುಕಟ್ಟೆ ಹೆಚ್ಚು ವಹಿವಾಟು ನಡೆಸುವ ಹೆಗ್ಗಳಿಕೆ ಹೊಂದಿದೆ.
ಆದರೆ, ಮಾವಿನ ಹಣ್ಣಿನ ಶೇಖರಣೆ ಹಾಗೂ ಸಂಸ್ಕರಣೆಗೆ ಸೂಕ್ತವಾದ ಸೌಲಭ್ಯವಿಲ್ಲದ ಕಾರಣ ಸೂಕ್ತ ಬೆಲೆ ಸಿಗದೆ ಮಾವು ಬೆಳೆಗಾರರು ನಷ್ಟ ಅನುಭವಿಸಬೇಕಾಗಿತ್ತು. ಮಾವು ಬೆಳೆಗಾರರಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ಎಲ್ಲಾ ಕಾರಣಕ್ಕಾಗಿ ರಾಮನಗರ ಜಿಲ್ಲೆಯಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸಬೇಕು ಎಂಬ ಕೂಗು ಎದ್ದಿತ್ತು. ಈ ಮನವಿಗೆ ಸ್ಪಂದಿಸಿದ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರವಧಿಯಲ್ಲಿ ಯೋಜನೆಗೆ ಹಸಿರು ನಿಶಾನೆ ನೀಡಿದ್ದರು.
ಆದರೆ, ಸೂಕ್ತ ಸ್ಥಳ ಹಾಗೂ ಇನ್ನಿತರ ಕಾರಣದಿಂದಾಗಿ ಯೋಜನೆ ಕಾರ್ಯರೂಪಕ್ಕೆ ಬರಲು ವಿಳಂಬವಾಗಿತ್ತು. ಪ್ರಾರಂಭದಲ್ಲಿ ತಾಲೂಕಿನ ಕೆಂಗಲ್ ಅಥವಾ ಕಣ್ವ ಪ್ರದೇಶದಲ್ಲಿ ಯೋಜನೆಯ ಅನುಷ್ಠಾನಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ, ಹಲವು ಕಾರಣಗಳಿಂದ ಆ ಸ್ಥಳಗಳು ಈ ಯೋಜನೆಗೆ ಸೂಕ್ತವಾಗಿಲ್ಲ ಎಂದು ಕೈ ಬಿಡಲಾಗಿತ್ತು. ಇದೀಗ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದ ಬಳಿ ಇರುವ ತೋಟಗಾರಿಕಾ ಇಲಾಖೆಯ ಜಾಗದಲ್ಲಿ ಮಾವು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳ ಸಂಸ್ಕರಣೆ ಮತ್ತು ಇತರ ಚಟುವಟಿಕೆಗಳಿಗೆ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿದೆ.
ಬೈರಾಪಟ್ಟಣ ಗ್ರಾಮದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ತೋಟಗಾರಿಕಾ ಕ್ಷೇತ್ರದ 15 ಎಕರೆ ಪ್ರದೇಶದಲ್ಲಿ ಈ ಸಂಸ್ಕರಣ ಘಟಕ ತಲೆ ಎತ್ತಲಿದೆ. ಈ ಸಂಬಂಧ ಈಗಾಗಲೇ 10 ಕೋಟಿ ರೂ. ವೆಚ್ಚದ ನೀಲನಕ್ಷೆ ಸಿದ್ಧಗೊಂಡಿದ್ದು, 15 ಎಕರೆ ಜಮೀನಿನ ಪೈಕಿ ನಾಲ್ಕು ಎಕರೆಯಲ್ಲಿ ಮಾವು ಸಂಸ್ಕರಣ ಘಟಕ ಜೊತೆಗೆ ಮಾವು ಬೆಳೆಯ ತರಬೇತಿ, ತೋಟಗಾರಿಕೆ ಸಂಪತ್ತು ಮತ್ತು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.
ನಾಲ್ಕು ಎಕರೆ ಪ್ರದೇಶದಲ್ಲಿ ಈ ಎಲ್ಲಾ ಅನುಕೂಲವನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಸ್ಥಾಪಿಸುವ ಯೋಜನೆ ಇದಾಗಿದೆ. ಉಳಿದ ೧೧ ಎಕರೆ ಪ್ರದೇಶವನ್ನು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಉಪ ಉತ್ಪನ್ನಗಳ ಸಮುಚ್ಛಯ ನಿರ್ಮಿಸಲು ಕಾಯ್ದಿರಿಸಲಾಗಿದೆ.




