ಚಿಕ್ಕಮಗಳೂರು

ಕೆವಿಎಎಫ್‌ಎಸ್‌ಯು ವಿವಿಗೆ ಸಿಬ್ಬಂದಿ ನೇಮಕಕ್ಕೆ ರಾಜ್ಯಪಾಲರಿಗೆ ಮನವಿ

ಚಿಕ್ಕಮಗಳೂರು: ಕೆವಿಎಎಫ್‌ಎಸ್‌ಯು ವಿಶ್ವವಿದ್ಯಾಲಯಕ್ಕೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅವಶ್ಯಕತೆಯಿದ್ದು ಆದಷ್ಟು ಬೇಗ ನೇಮಕ ಮಾಡಿಕೊಡಬೇಕೆಂದು ವಿಶ್ವವಿದ್ಯಾಲಯದ ಚಾನ್ಸೆಲ್ಲರು ಸಹ ಆಗಿರುವ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲ ಡಾ.ಥಾವರ ಚಂದ್ ಗೆಹಲಾಟ್ ಅವರಿಗೆ ವಿವಿ ಆಡಳಿತ ಮಂಡಳಿಯ ನಿರ್ದೇಶಕ ದೀಪಕ್ ದೊಡ್ಡಯ್ಯ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಪಶುಸಂಗೋಪನೆ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯ (KVAFSU) ಬೀದರ್ ಇದು ರಾಜ್ಯಾದ್ಯಂತ ವ್ಯಾಪ್ತಿ ಹೊಂದಿರುವುದರಿಂದ ಅವಶ್ಯಕತೆ ಇರುವಷ್ಟು ಪ್ರಮಾಣದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆಯ ಕಾರಣ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದ್ದಾರೆ.

ಬೀದರ್ ನಗರದ ನಂದಿಗ್ರಾಮದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ವಿಶ್ವವಿದ್ಯಾಲಯ, ಬೆಂಗಳೂರಿನ ಹೆಬ್ಬಾಳದಲ್ಲಿ ವಿಭಾಗೀಯ ಕಾರ್ಯಾಲಯ ಹೊಂದಿದೆ. ಬೆಂಗಳೂರು, ಬೀದರ್, ಶಿವಮೊಗ್ಗ, ಗದಗ್ ಮತ್ತು ಹಾಸನ ನಗರಗಳಲ್ಲಿ ಪಶುವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹೊಸ ಕಾಲೇಜುಗಳು ಆರಂಭವಾಗಬೇಕಿದೆ. ಅಗತ್ಯ ಸಿಬ್ಬಂದಿಗಳ ನೇಮಕಾತಿಗಾಗಿ ಕಾಯುತ್ತಿವೆ ಎಂದು ಪ್ರಸ್ತಾಪಿಸಿದ್ದಾರೆ.

ಶಿಗ್ಗಾವ್, ತಿಪಟೂರ್, ಶಹಪುರ್, ಹಾಸನ ಮತ್ತು ಗುಂಡ್ಲುಪೇಟೆಗಳಲ್ಲಿ ಐದು ಪಶುಸಂಗೋಪನ ಪಾಲಿಟೆಕ್ ಗಳಿದ್ದು, ಬೆಂಗಳೂರು ಸಮೀಪದ ಹೆಬ್ಬಾಳ ಮತ್ತು ಗುಲ್ಬರ್ಗದ ಸಮೀಪದ ಮಹಾಗಾಂವ್ ಗಳಲ್ಲಿ ಹೈನುಗಾರಿಕಾ ಕಾಲೇಜುಗಳು ನಡೆಯುತ್ತಿವೆ. ಮಂಗಳೂರು ನಗರದಲ್ಲಿ ಮೀನುಗಾರಿಕಾ ಕಾಲೇಜು ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಹದಿನೈದು ಸಂಶೋಧನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಶೈಕ್ಷಣಿಕ ಕೇಂದ್ರಗಳಲ್ಲಿಯೂ ಶೇ.40ರಷ್ಟು ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಶೇ.60ರಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಹುದ್ದೆಗಳು ಸುಮಾರು ಏಳೆಂಟು ವರ್ಷಗಳಿಂದ ಖಾಲಿಯಿವೆ. ಹೀಗಾಗಿ ಶೈಕ್ಷಣಿಕ ಅಭಿವೃದ್ಧಿಗೆ ತೀವ್ರ ತೊಂದರೆಯಾಗಿದೆ. ರಾಜ್ಯಪಾಲರು ಮದ್ಯೆ ಪ್ರವೇಶಿಸಿ, ಅಗತ್ಯವಿರುವ ಸಿಬ್ಬಂದಿ ವರ್ಗದವರನ್ನು ಕೂಡಲೇ ನೇಮಿಸಿಕೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ದೀಪಕ್ ದೊಡ್ಡಯ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button