ಉತ್ತರ ಕನ್ನಡ

ಭಟ್ಕಳ ತಾಲೂಕಿನಲ್ಲಿ ತಲೆ ಎತ್ತುತ್ತಿದೆ ಮರಳು ಮಾಫಿಯಾ

ಕಾರವಾರ: ಭಟ್ಕಳ ತಾಲೂಕಿನಲ್ಲಿ ಮರಳು ಮಾಫಿಯಾ ತಲೆ ಎತ್ತುತ್ತಿದ್ದು, ಮರಳು ಮಾಲಕರು ಮತ್ತು ಏಜೆಂಟರ ಯೂನಿಯನ್ ಈಗಾಗಲೇ ಹುಟ್ಟಿಕೊಂಡಿದ್ದು, ಸರಕಾರದ ಮರಳು ನೀತಿಯನ್ನು ದಿಕ್ಕರಿಸಿ ತಮ್ಮದೇ ಆದ ದರವನ್ನು ಗೊತ್ತುಪಡಿಸಿಕೊಂಡು ಬಡ,ಅಮಾಯಕರ ರಕ್ತ ಹೀರುವಂತ ಕೆಲಸ ತಾಲೂಕಿನಲ್ಲಿ ನಡೆಯುತ್ತಿದೆ.

ತಾಲೂಕಿನಲ್ಲಿ ಈಗಾಗಲೇ ಕೊರೋನಾ ಮಹಾಮಾರಿಯ ಕಾರಣ ಸಾರ್ವಜನಿಕರು ಹೈರಾಣಾಗಿದ್ದು,ಪುನಃ ಈಗ ಕೊರೋನಾ ಮಹಾಮಾರಿ ವಕ್ಕರಿಸಿಕೊಂಡಿದೆ.ಈ ಕಾರಣ ಸಾರ್ವಜನಿಕರು ಪುನಃ ಸಂಕಷ್ಟವನ್ನು ಎದುರಿಸುವ ಅನಿವಾರ್ಯತೆ ಎದುರಾಗಿದೆ.ಇದರ ನಡುವೆ ಕೆಲವು ವ್ಯಕ್ತಿಗಳು ತಮ್ಮ ಸ್ವಹಿತಕ್ಕಾಗಿ ಮರಳು ನೀತಿಯಲ್ಲಿ ತಮ್ಮದೇ ಆದ ದರವನ್ನು ತಾಲೂಕಿನಲ್ಲಿ ನಿಗಧಿ ಪಡಿಸಿಕೊಂಡು ಮರಳು ಮಾರಾಟಕ್ಕೆ ಮುಂದಾಗಿದ್ದಾರೆ.ತಾಲೂಕಿನಲ್ಲಿ ಮರಳು ಮಾಲೀಕರು ಮತ್ತು ಏಜೆಂಟರುಗಳ ಯೂನಿಯನ್ ಒಂದನ್ನು ಹುಟ್ಟುಹಾಕಿ ತಮ್ಮದೇ ಮರಳು ನೀತಿಯನ್ನು ಮಾಡಲು ಹೊರಟಿದ್ದಾರೆ.

ಶಿರಾಲಿಗೆ ಮರಳು ದರ ಎರಡು ಯೂನಿಟ್ ಗಳಿಗೆ 8500 ರಿಂದ 9500 ಹಾಗೂ ಮೂರು ಯುನಿಟ್ಟಿಗೆ 13000 ದಿಂದ 14000 ನಿಗಧಿ ಮಾಡಿದ್ದು,ಭಟ್ಕಳ ದಾನಿಶ್ ಹೋಟೆಲ್ ತನಕ ಎರಡು ಯೂನಿಟ್ಟಿಗೆ 9000 ದಿಂದ 10.000 ಹಾಗೂ ಮೂರು ಯೂನಿಟ್ಟಿಗೆ 13.500 ರಿಂದ15.000 ರೂ.ವರೆಗೆ ದರ ನಿಗಧಿಪಡಿಸಿದೆ.

ಸರ್ಪನಕಟ್ಟೆ ಹಾಗೂ ಗೊರ್ಟೆಯ ತನಕ ಎರಡು ಯೂನಿಟ್ ಗಳಿಗೆ 9500 ರಿಂದ 10.500.ಮೂರು ಯುನಿಟ್ ಗಳಿಗೆ 14.500 ರಿಂದ 15.500 ಎಂದು ಅನಧಿಕೃತವಾಗಿ ದರವನ್ನು ನಿಗಧಿಪಡಿಸಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಮರಳು ನೀತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ನೀಡುತ್ತಿಲ್ಲ.

ಈಗಾಗಲೇ ಇವರು ತಮ್ಮದೇ ಆದ ಒಂದು ಸುತ್ತೋಲೆಯನ್ನು ಹೊರಡಿಸಿದ್ದು, ಯಾರು ತಮ್ಮ ಯುನಿಯನ್ ನಿಯಮಾವಳಿಗೆ ವಿರುದ್ದವಾಗಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳನ್ನು ಸರಬರಾಜು ಮಾಡುತ್ತಾರೋ ಅಂತವರ ವಿರುದ್ದ ಕ್ರಮ‌ ಕೈಗೊಳ್ಳಲಾಗುವುದು ಎಂದು ಕೂಡ ಸುತ್ತೋಲೆಯಲ್ಲಿ ಹೇಳಲಾಗಿದೆ.ಅಲ್ಲದೇ ಈ ಯುನಿಯನ್ ಮೂಲಕ ತಾಲೂಕಿನ ಮರಳು ಮಾಲಕರು ಹಾಗೂ ಏಜೆಂಟರುಗಳಿಗೆ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ತಾವು ಯಾವುದೇ ಸಾರ್ವಜನಿಕರಿಗೆ ತಮ್ಮ ಯೂನಿಯನ್ ನಿಯಮಾವಳಿಗೆ ವಿರುದ್ದವಾಗಿ ಕಡಿಮೆ ದರದಲ್ಲಿ ಮರಳನ್ನು ಒದಗಿಸಲಾರೆವು ಎಂದು ಆಣೆ,ಪ್ರಮಾಣವನ್ನು ಮಾಡಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.ಒಟ್ಟಾರೆ ತಾಲೂಕಿನಲ್ಲಿ ಮರಳು ಮಾಫಿಯಾದ ಮೂಲಕ ಸಾರ್ವಜನಿಕರನ್ನು ಹಿಂಡಿ ಹಿಪ್ಪೆ ಮಾಡಲು ಎಲ್ಲಾ ಸಿದ್ದತೆ ನಡೆದಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ.

ಈಗಾಗಲೇ ಕೆಲವು ಮರಳು ಮಾಲೀಕರು ಏಜೆಂಟರುಗಳ ಮೂಲಕ ಎರ್ರಾಬಿರ್ರಿ ದರವನ್ನು ಏರಿಸಿ ಮರಳನ್ನು ಮಾರಾಟ ಮಾಡುತ್ತಿದ್ದಾರೆ.ಸಾರ್ವಜನಿಕರು ಮೊದಲೇ ಕೊರೋನಾದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ ಈ ಮರಳು ಮಾಫಿಯಾಕ್ಕೆ ಸಿಲುಕಿ ಕಂಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಯಾವ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button