Breaking NewsLatestರಾಜಕೀಯರಾಜ್ಯ

ಜೆಡಿಎಸ್ ಪ್ರಬಲ ರಾಜಕೀಯ ಶಕ್ತಿ; ಕುತೂಹಲ ಮೂಡಿಸಿದೆ ಅನಂತ್​ಕುಮಾರ್ ಪುತ್ರಿ ವಿಜೇತಾ ಟ್ವೀಟ್

ಬೆಂಗಳೂರು: ಮಾಜಿ ಕೇಂದ್ರ ಸಚಿವ ದಿ.ಅನಂತಕುಮಾರ್ ಅವರ ಕುಟುಂಬ ಬಿಜೆಪಿಯಿಂದ ವಿಮುಖವಾಗುತ್ತಿದೆಯಾ, ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಬೇರೊಂದು ಪಕ್ಷದ ಕಡೆ ನೋಡುತ್ತಿದೆಯಾ?

ಇಂಥದೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವುದು, ಅನಂತ್​ಕುಮಾರ್ ಅವರ ಪುತ್ರಿ ವಿಜೇತಾ ಅನಂತ್​ಕುಮಾರ್ ಮಾಡಿರುವ ಟ್ವೀಟ್. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಯಾಕೆ ಕರ್ನಾಟಕ ರಾಜಕೀಯ ನಿಜವಾಗಲೂ ಆಸಕ್ತಿದಾಯಕವಾಗಿದೆ? ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಇನ್ನೂ ಜೆಡಿಎಸ್ ಪ್ರಬಲವಾಗಿದೆ ಎಂಬುದು ವಿಜೇತಾ ಮಾಡಿರುವ ಟ್ವೀಟ್.

ಇದ್ದಕ್ಕಿದ್ದಂತೆ ವಿಜೇತಾ ಹೀಗೊಂದು ಟ್ವೀಟ್ ಮಾಡಲು ಕಾರಣವೇನು ಎಂಬುದು ಸ್ಪಷ್ಟವಿಲ್ಲವಾದರೂ, ಅನಂತ್​ಕುಮಾರ್ ಕುಟುಂಬ ಬಿಜೆಪಿಯಿಂದ ಮಾನಸಿಕವಾಗಿ ದೂರ ಸರಿಯುತ್ತಿದೆ ಎನ್ನಿಸಲು ಇದು ಕಾರಣವಾಗಿದೆ. ಅನಂತ್​ಕುಮಾರ್ ಅವರ ಬಳಿಕ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಕುಟುಂಬ ಬೇರೊಂದು ಪಕ್ಷದ ಕಡೆ ನೋಡುತ್ತಿದೆಯಾ ಎಂಬ ಅನುಮಾನ ಸಹಜವಾಗಿಯೇ ಮೂಡಲು ಈ ಟ್ವೀಟ್ ಎಡೆ ಮಾಡಿಕೊಟ್ಟಿದೆ.

ಅನಂತಕುಮಾರ್ ನಿಧನರಾದ ನಂತರ ಅವರ ಪತ್ನಿ ಜೇಜಸ್ವಿನಿ ಅನಂತಕುಮಾರ್ ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಮದ ಸ್ಪರ್ಧಿಸಲು ಅವಕಾಶ ಸಿಕ್ಕೀತೆಂದು ಕುಟುಂಬ ನಿರೀಕ್ಷಿಸಿದ್ದರೆ ಅಚ್ಚರಿಯಿಲ್ಲ. ಪಕ್ಷದೊಳಗೂ ಅಂತ ಮಾತುಗಳಿದ್ದವು. ಆದರೆ ಕೊನೇ ಘಳಿಗೆಯಲ್ಲಿ ಅವರಿಗೆ ಟಿಕೆಟ್ ತಪ್ಪಿಸಲಾಗಿತ್ತು. ತೇಜಸ್ವಿ ಸೂರ್ಯಗೆ ಟಿಕೆಟ್ ದಕ್ಕಿತ್ತು. ಈ ನಿರ್ಧಾರಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರದೇ ಇದ್ದರೂ, ಅನಂತಕುಮಾರ್ ಕುಟುಂಬಕ್ಕೆ ಬೇಸರವಾಗಿದ್ದಂತೂ ನಿಜ.

ಈ ಹಿನ್ನೆಲೆಯಲ್ಲಿ ಇದೀಗ ವಿಜೇತಾ ಮಾಡಿರುವ ಟ್ವೀಟ್ ಕುತೂಹಲ ಕೆರಳಿಸಿದೆ. ಅರ್ಥಶಾಸ್ತ್ರ ಪದವೀಧರೆಯಾಗಿರುವ ವಿಜೇತಾ, ತಮ್ಮ ಅದಮ್ಯ ಚೇತನ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಧನ್ಯವಾದ ಹೇಳಿದ ಎಚ್​ಡಿಕೆ

ವಿಜೇತಾ ಅವರು ಜೆಡಿಎಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಪಕ್ಷದ ನಾಯಕ, ಮಾಜಿ ಸಿಎಂ ಎಚ್​ಡಿಕೆ ಹರ್ಷ ವ್ಯಕ್ತಪಡಿಸಿದ್ದು, ಧನ್ಯವಾದ ಸಲ್ಲಿಸಿದ್ದಾರೆ. ನಮ್ಮ ಪಕ್ಷ ಇಲ್ಲವೆ ಇಲ್ಲ ಎನ್ನುವವರಿಗೆ ಇದು ಸರಿಯಾದ ಉತ್ತರ ಎಂದಿರುವ ಅವರು, ನಾನು ಮತ್ತು ಅನಂತ್​ಕುಮಾರ್ ಸ್ನೇಹಿತರಾಗಿದ್ದೆವು ಎಂದು ನೆನಪಿಸಿಕೊಂಡಿದ್ದಾರೆ.

ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಕೂಡ ವಿಜೇತಾ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದು, ಅನಂತ್​ಕುಮಾರ್ ಅವರು ಇದ್ದಾಗ ಅವರು ಸದಾ ರಾಜ್ಯದ ಹಿತಾಸಕ್ತಿ ಕಾಯುತ್ತಿದ್ದರು. ಈಗ 25 ಸಂಸದರು ಬಿಜೆಪಿಯಿಂದ ಇದ್ದರೂ ಯಾರೊಬ್ಬರೂ ರಾಜ್ಯದ ಪರವಾಗಿ ದನಿಯೆತ್ತುತ್ತಿಲ್ಲ. ರಾಜ್ಯಕ್ಕಾಗಿ ನೀಡಿದ ಕೊಡುಗೆಗಾಗಿ ಅನಂತ್​ಕುಮಾರ್ ಅವರಿಗೆ ನಾವು ಋಣಿಯಾಗಿರಬೇಕು ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button