ಹನಿಟ್ರ್ಯಾಪ್ ಪ್ರಕರಣ; ಯುವತಿ ಸೇರಿ ಇಬ್ಬರು ಸೆರೆ
ಮಂಗಳೂರು: ವ್ಯಕ್ತಿಯೋರ್ವರಿಗೆ ಹನಿಟ್ರಾಪ್ ಮಾಡಿ ಹಣ ದೋಚಿದ ಪ್ರಕರಣದಲ್ಲಿ ಆರೋಪಿಗಳಾದ ಓರ್ವ ಯುವತಿ ಹಾಗೂ ಓರ್ವ ಯುವಕನನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ, ಉಳ್ಳಾಲದ ಅಪಾರ್ಟ್‌ಮೆಂಟ್ ವೊಂದರಲ್ಲಿ ವಾಸವಿದ್ದ ಯುವತಿ ಮತ್ತು ಆಕೆಯ ಸ್ನೇಹಿತ ಪಾರ್ಟಿ ಮಾಡುವ ನೆಪದಲ್ಲಿ ಪಕ್ಕದ ಮನೆಯ ವ್ಯಕ್ತಿಯೋರ್ವರಿಗೆ ಮದ್ಯದೊಂದಿಗೆ ಅಮಲು ಪದಾರ್ಥ ಬೆರೆಸಿ ಕುಡಿಸಿ, ಬಳಿಕ ಆತನನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿ ಮನೆಯಿಂದ 2.15 ಲಕ್ಷ.ರೂ ಹಾಗೂ ಉಂಗುರವನ್ನು ಕಳವು ಮಾಡಿ ಹನಿಟ್ರಾಪ್ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.
ಅಝ್ವನ್ ಹಾಗೂ ಗೆಳತಿ ಸಫ್ನಾ ಎಂಬವರು ಜು.19ರಂದು ಪಾರ್ಟಿ ಮಾಡುವುದಾಗಿ ಹೇಳಿ ವ್ಯಕ್ತಿಗೆ ಮದ್ಯ ಕುಡಿಸಿದ್ದಾರೆ. ಅದರಲ್ಲಿ ಅಮಲು ಬರುವ ಪದಾರ್ಥವನ್ನು ಬೆರೆಸಿದ್ದರು ಎನ್ನಲಾಗಿದೆ. ವ್ಯಕ್ತಿ ಪ್ರಜ್ಞೆತಪ್ಪಿದ ಮೇಲೆ ವಿವಸ್ತ್ರಗೊಳಿಸಿ ಮನೆಯ ಕಪಾಟಿನಲ್ಲಿದ್ದ ರೂ. 2.12 ಲಕ್ಷ ಹಣ ಹಾಗೂ ವ್ಯಕ್ತಿಯ ಕೈಯಲ್ಲಿದ್ದ ನವರತ್ನದ ಉಂಗುರವನ್ನು ದೋಚಿದ್ದಾರೆ.
ಮರುದಿನ ವಂಚನೆಗೊಳಗಾಗಿದ್ದ ವ್ಯಕ್ತಿ ಆರೋಪಿಗಳ ಮನೆಗೆ ಹೋಗಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹೇಳಿದ್ದಾರೆ. ಆಗ ಹಣವನ್ನು ನಾಳೆ ಕೊಡುವುದಾಗಿ ಹೇಳಿ, ಪೊಲೀಸರಿಗೆ ದೂರು ಕೊಡುವುದನ್ನು ತಪ್ಪಿಸಿದ್ದರು. ಆದರೆ ಆರೋಪಿಗಳು ಮತ್ತೆ ಆ ವ್ಯಕ್ತಿಯ ಮನೆಗೆ ಹೋಗಿ, ಮೊಬೈಲಿನಲ್ಲಿ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹೆದರಿಸಿದ್ದಾರೆ. ತನ್ನ ತಂಗಿಯ ಬಲಾತ್ಕಾರಕ್ಕೆ ಯತ್ನಿಸಿರುವುದಾಗಿ ಪ್ರಕರಣ ದಾಖಲಿಸುವುದಾಗಿಯೂ ಅಝ್ವೀನ್ ಬೆದರಿಕೆ ಒಡ್ಡಿದ್ದ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪೊಲೀಸರು ಅಝ್ವೀನ್ (24) ಹಾಗೂ ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಸಫ್ನಾ (23) ಎಂಬುವವರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹನಿಟ್ರಾಪ್ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ, ಕೆಲವರು ತಮ್ಮ ಗೌರವಕ್ಕೆ ಧಕ್ಕೆಯಾಗುವುದೆಂಬ ದೃಷ್ಟಿಯಿಂದ ದೂರು ನೀಡಲು ಹಿಂಜರಿಯುತ್ತಾರೆ. ಆದರೆ ಮತ್ತಷ್ಟು ತೊಂದರೆ ಅನುಭವಿಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಪೊಲೀಸರಿಗೆ ದೂರು ಅಥವಾ ಮಾಹಿತಿಯನ್ನು ನೀಡಿದರೆ ಗೌಪ್ಯತೆ ಕಾಪಾಡಿಕೊಂಡು ತನಿಖೆ ನಡೆಸುವುದಾಗಿ ಶಶಿಕುಮಾರ್ ತಿಳಿಸಿದ್ದಾರೆ.




