ಉತ್ತರ ಕನ್ನಡ
ಬೊಮ್ಮಾಯಿ ಆಯ್ಕೆ ವಿಜಯೇಂದ್ರನನ್ನು ಸಿಎಂ ಮಾಡುವುದಕ್ಕೆ; ಆನಂದ ಅಸ್ನೋಟಿಕರ್ ವ್ಯಂಗ್ಯ

ಕಾರವಾರ : ಬಸವರಾಜ ಬೊಮ್ಮಾಯಿಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿರುವುದು ಭವಿಷ್ಯದಲ್ಲಿ ಬಿ.ವೈ.ವಿಜಯೇಂದ್ರರನ್ನು ಸಿಎಂ ಮಾಡುವುದಕ್ಕಾಗಿ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಆನಂದ್ ಅಸ್ನೋಟಿಕರ್ ವ್ಯಂಗ್ಯವಾಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್ ಅಸ್ನೋಟಿಕರ್, ಬಸವರಾಜ ಬೊಮ್ಮಾಯಿ ಆಯ್ಕೆಯಿಂದ ಬಿ.ಎಸ್. ಯಡಿಯೂರಪ್ಪ ಹಿಡಿತ ಸಾಧಿಸಿದ್ದಾರೆ. ಸೂಪರ್ ಸಿಎಂ ಆಗಿ ಯಡಿಯೂರಪ್ಪ ಇನ್ನು ಮುಂದೆ ರಾಜ್ಯದಲ್ಲಿ ಅಧಿಕಾರ ಚಲಾಯಿಸುತ್ತಾರೆ. 2023ಕ್ಕೆ ಬಿಎಸ್ವೈ ಪುತ್ರ ವಿಜಯೇಂದ್ರನನ್ನು ಮುಖ್ಯಮಂತ್ರಿ ಮಾಡಲು ಬೊಮ್ಮಾಯಿಯನ್ನು ಈಗ ಸಿಎಂ ಮಾಡಿದ್ದಾರೆ ಎಂದರು.
ಬಿಜೆಪಿಯ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಸಿ.ಪಿ.ಯೋಗೇಶ್ವರ್ ಕಳೆದ ಐದಾರು ತಿಂಗಳಿನಿಂದ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದರು. ಯತ್ನಾಳ್ ಕೂಗಾಟ ಮಾಡಿದರೂ ಏನೂ ಮಾಡಿಕೊಳ್ಳಲಾಗಲಿಲ್ಲ.ಬಿಜೆಪಿ ಶಿಸ್ತಿನ ಪಕ್ಷ ಆಗಿದ್ದರೆ ಅವರಿಬ್ಬರನ್ನೂ ಮಂತ್ರಿ ಮಾಡಬಾರದು ಎಂದು ಅಸ್ನೋಟಿಕರ್ ಹೇಳಿದರು.




