Breaking Newsಉತ್ತರ ಕನ್ನಡಜಿಲ್ಲಾ ಸುದ್ದಿ

ಪ್ರವಾಹದಿಂದ ತತ್ತರಿಸಿದ ಉತ್ತರ ಕನ್ನಡ : 108 ಗ್ರಾಮಗಳಿಗೆ ಹಾನಿ

ಕಾರವಾರ : ಧಾರಾಕಾರವಾಗಿ ಸುರಿದ ಮಳೆಯಿಂದ ಉತ್ತರ ಕನ್ನಡ ಜಿಲ್ಲೆಯ ನದಿಗಳು ಉಕ್ಕಿ ಹರಿದು ಸೃಷ್ಟಿಸಿದ ಪ್ರವಾಹದಿಂದ ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಹಾನಿ ಸಂಭವಿಸಿದೆ. ಜಿಲ್ಲೆಯ ಒಟ್ಟು 108 ಗ್ರಾಮಗಳಿಗೆ ನೆರೆಯಿಂದ ಹಾನಿಯಾಗಿದ್ದು, 4 ಜನ ಸಾವನ್ನಪ್ಪಿ, ಮೂವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಕಳೆದ ಮೂರು ದಿನಗಳಿಂದ ಜಿಲ್ಲೆಯ ಘಟ್ಟದ ಮೇಲೆ ಹಾಗೂ ಕರಾವಳಿ ತಾಲೂಕಿನಲ್ಲಿ ಸುರಿದ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ. ಅದರಲ್ಲೂ ಕಾಳಿ, ಗಂಗಾವಳಿ,ಅಘನಾಶಿನಿ ನದಿ ರೌದ್ರಾವತಾರ ತಾಳಿದ್ದರಿಂದ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು, ಅಂಕೋಲಾ, ಯಲ್ಲಾಪುರ, ಕಾರವಾರ, ಶಿರಸಿ, ಸಿದ್ದಾಪುರ ತಾಲೂಕುಗಳು ಅಕ್ಷರಶಃ ನಲುಗಿವೆ.

ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 59 ಮನೆಗಳು ಸಂಪೂರ್ಣ ಹಾನಿಯಾಗಿದ್ದರೆ, 281 ಮನೆಗಳು ಭಾಗಶಃ ಹಾನಿಯಾಗಿದೆ. ಇನ್ನು 15287 ಜನರಿಗೆ ಪ್ರವಾಹದಿಂದ ಹಾನಿಯಾಗಿದ್ದು,ಅದರಲ್ಲಿ 15249 ಜನರನ್ನು ಸ್ಥಳಾಂತರ ಮಾಡಲಾಗಿದೆ.

15214 ಜನರನ್ನು ಕಾಳಜಿ ಕೇಂದ್ರದಲ್ಲಿ ಇರಿಸಲಾಗಿತ್ತು.ಸದ್ಯ 132 ಕಾಳಜಿ ಕೇಂದ್ರದಲ್ಲಿ 15077 ಜನರು ತಂಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪ್ರವಾಹಕ್ಕೆ ಸಿಲುಕಿ 43 ಜಾನುವಾರು ಸಾವನ್ನಪ್ಪಿದ್ದು, 912.88 ಹೆಕ್ಟೇರ್ ಕೃಷಿ ಭೂಮಿ ಹಾಗೂ 61 ಹೆಕ್ಟೇರ್ ತೋಟಗಾರಿಕಾ ಭೂಮಿಗೆ ಹಾನಿ ಸಂಭವಿಸಿದೆ.

ಜಿಲ್ಲೆಯಲ್ಲಿ ಒಟ್ಟು 156.8 ಕಿಲೋ ಮೀಟರ್ ರಸ್ತೆ,32 ಸೇತುವೆ ಹಾಗೂ ಕಾಲುಸಂಕಗಳು ನೆರೆಯಿಂದ ಹಾನಿಗೊಳಗಾಗಿವೆ.8 ಶಾಲೆ,1 ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಹಾನಿಯಾಗಿದ್ದು, 657 ವಿದ್ಯುತ್ ಕಂಬಗಳು, 39 ಟ್ರಾನ್ಸ್‌ಫಾರ್ಮರ್‌ಗಳು ಹಾನಿಯಾಗಿವೆ.

ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಹಾಗೂ ಕಾರವಾರ ತಾಲೂಕಿನಲ್ಲಿ ಕದ್ರಾ ಜಲಾಶಯದಿಂದ ನೀರು ಬಿಡುವ ಪ್ರಮಾಣ ಕಡಿಮೆ ಮಾಡಿದ್ದು, ನೀರು ಇಳಿದ ಬಳಿಕ ಸಂಪೂರ್ಣ ಹಾನಿಯ ಮಾಹಿತಿ ದೊರೆಯಲಿದೆ.

Related Articles

Leave a Reply

Your email address will not be published. Required fields are marked *

Back to top button