ಕಟೀಲ್ ಈಗ ದಲಿತರನ್ನು ಸಿಎಂ ಮಾಡಲಿ; ಸಿದ್ದರಾಮಯ್ಯ ವ್ಯಂಗ್ಯ

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇತ್ತೀಚೆಗೆ ದಲಿತ ಸಿಎಂ ವಿಚಾರದ ಹೇಳಿಕೆ ನೀಡಿದ್ದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾದ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರನ್ನು ಸಿಎಂ ಎಂದು ಘೋಷಣೆ ಮಾಡಲಿ ಎಂದು ನನಗೇ ಸವಾಲು ಹಾಕಿದ್ದ ಕಟೀಲಿಗೆ ಈಗ ತಮ್ಮ ಪಕ್ಷದಲ್ಲೇ ಅವಕಾಶ ಸಿಕ್ಕಿದೆಯಲ್ಲ. ಹೇಗೂ ಯಡಿಯೂರಪ್ಪರನ್ನು ಅಧಿಕಾರದಿಂದ ತೆಗೆಯುತ್ತಾರೆ. ಈಗ ಕಟೀಲ್ ದಲಿತರನ್ನು ಸಿಎಂ ಮಾಡಲಿ ಎಂದು ವಾಗ್ದಾಳಿ ನಡೆಸಿದರು.
ದೇಶಾದ್ಯಂತ ನಮ್ಮ ಪಕ್ಷದ ಆಡಳಿತದಲ್ಲಿ ಈಗಾಗಲೇ 4 ಮಂದಿ ದಲಿತರು ಮುಖ್ಯಮಂತ್ರಿಗಳಾಗಿದ್ದಾರೆ. ಈಗ ಕರ್ನಾಟಕದಲ್ಲಿ ಬಿಜೆಪಿಗೆ ಅವಕಾಶ ಸಿಕ್ಕಿದೆ. ಹುದ್ದೆ ಖಾಲಿ ಇದೆಯಲ್ಲ? ದಲಿತರ ಮೇಲೆ ಪ್ರೀತಿಯಿದೆಯಲ್ಲ? ಸಿಎಂ ಮಾಡಲಿ ನೋಡೋಣ ಎಂದು ಒತ್ತಿ ಹೇಳಿದರು.
ಸಾಮಾಜಿಕ ನ್ಯಾಯ ಅವರಲ್ಲೇ ಇಲ್ಲ. ಇನ್ನೊಬ್ಬರ ಬಗ್ಗೆ ನೀವು ಸಾಮಾಜಿಕ ನ್ಯಾಯ ಮಾಡ್ತಿದ್ದೀರೋ ಇಲ್ಲವೋ? ಎಂದು ನಮ್ಮನ್ನೇ ಕೇಳುತ್ತಾರೆ. ಯಾರೇ ಮುಖ್ಯಮಂತ್ರಿಯಾಗಿ ಬದಲಾದರೂ ಬಿಜೆಪಿ ಭ್ರಷ್ಟ ಆಡಳಿತ ನಡೆಸುತ್ತದೆ. ಯಾರನ್ನು ಸಿಎಂ ಮಾಡುತ್ತಾರೋ ಗೊತ್ತಿಲ್ಲ. ಬರುವವರೂ ಕೂಡ ಅಷ್ಟೇ ಕರಪ್ಟ್ ಆಗಿರುತ್ತಾರೆ ಎಂದರು.
2019ರಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಾಗ ಉಂಟಾದ ಪ್ರವಾಹದಲ್ಲಿ ಜನ ತತ್ತರಿಸಿದ್ದರು. ಅದನ್ನೇ ಪರಿಹಾರ ಕೊಟ್ಟಿಲ್ಲ. ಈಗ ಮತ್ತೆ ಎಲ್ಲಾ ಕಡೆ ಪ್ರವಾಹ ಬಂದು ಜನರು ಕಷ್ಟದಲ್ಲಿ ಸಿಲುಕಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಪ್ರಾಣಿಗಳು ಬಲಿಯಾಗಿವೆ. ಮನೆಗಳು ಬಿದ್ದಿವೆ. ಸೂಕ್ತ ಪರಿಹಾರ ನೀಡುವತ್ತ ಗಮನ ಹರಿಸಲಿ ಎಂದು ಆಗ್ರಹಿಸಿದರು.
ಭ್ರಷ್ಟ ಆಡಳಿತ ನಡೆಸುತ್ತಿರುವುದಲ್ಲದೆ ಎಲ್ಲರ ಫೋನ್ ಕದ್ದಾಲಿಕೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ಜಡ್ಜ್ಗಳದ್ದೇ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಇದು ದೇಶದ್ರೋಹ ಅಲ್ಲವೇ? ಎಂದು ಪ್ರಶ್ನಿಸಿದರು.
ನನ್ನ ಪಿಎ ನಂಬರ್ ಕದ್ದಾಲಿಕೆ ಮಾಡಿದ್ದಾರೆ. ಕುಮಾರಸ್ವಾಮಿ, ಜಿ.ಪರಮೇಶ್ವರ್ ಸಹಿತ ಅನೇಕ ನಾಯಕರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ಸರ್ಕಾರ ಕಿತ್ತುಹಾಕಲು ಏನು ಮಾಡಬೇಕೋ ಆ ಪ್ರಯತ್ನವನ್ನೆಲ್ಲಾ ಮಾಡಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.
ಯಾರೇ ಮಠಾಧೀಶರಾದರೂ ರಾಜಕಾರಣಕ್ಕೆ ಕೈ ಹಾಕಬಾರದು. ಅವರ ಅಭಿಪ್ರಾಯಯ ಹೇಳಲಿ. ಜನರ ಅಭಿಪ್ರಾಯ ಮುಖ್ಯ ಎಂದು ಮಠಾಧೀಶರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು.
