ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ; ಹಿಪ್ಪರಗಿ ಜಲಾಶಯಕ್ಕೆ 84 ಸಾವಿರ ಕ್ಯೂಸೆಕ್ ನೀರು

ಬಾಗಲಕೋಟೆ : ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ಸಮೀಪದ ಕೃಷ್ಣಾ ನದಿ ನೀರಿನ ಒಳ ಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಪ್ಪರಗಿ ಜಲಾಶಯಕ್ಕೆ 84 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ನೀರನ್ನು ಹೊರ ಬೀಡಲಾಗುತ್ತಿದ್ದು, ನೀರಿನ ಮಟ್ಟ 520.60 ಮೀ ಇದೆ ಎಂದು ರಬಕವಿ-ಬನಹಟ್ಟಿ ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಮಾತನಾಡಿ, ಮಹಾರಾಷ್ಟ್ರರಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಸದ್ಯಕ್ಕೆ ಯಾವುದೇ ಪ್ರವಾಹದ ಬೀತಿ ಇಲ್ಲ. ನಮ್ಮ ಅಧಿಕಾರಿಗಳು ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪ್ರತಿದಿನ ಅಲ್ಲಿ ಆಗುವ ಮಳೆ ಹಾಗೂ ಅಲ್ಲಿನ ಬ್ಯಾರೇಜ್ಗಳಿಂದ ಬೀಡುವ ನೀರಿನ ಬಗ್ಗೆ ಮಾಹಿತಿ ಪಡೆದು ಅದರ ಮೇಲೆ ನಿಗಾ ವಹಿಸಲಾಗಿದೆ. ಆದರೂ ಸುರಕ್ಷತಾ ದೃಷ್ಟಿಯಿಂದ ನದಿ ಪಾತ್ರದಲ್ಲಿ ವಾಸಿಸುವ ಜನರು ಹಾಗೂ ಜಾನವಾರುಗಳನ್ನು ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ ಎಂದರು.




