ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ; ಹಲವೆಡೆ ಪ್ರವಾಹ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ವರುಣನ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಹಲವು ಭಾಗದಲ್ಲಿ ಮಳೆಯ ಅಬ್ಬರಕ್ಕೆ ಮನೆಗಳು ಹಾಗೂ ಕೃಷಿ ಭೂಮಿ ಜಲಾವೃತವಾಗಿದ್ದು,ಗುಡ್ಡ ಕುಸಿತ ಸಹ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು,ಸಂಜೆ ವೇಳೆಯಲ್ಲಿ ಇಡೀ ಜಿಲ್ಲೆಯಲ್ಲಿ ಪ್ರವಾಹವನ್ನು ಸೃಷ್ಟಿಸಿದೆ.ಜಿಲ್ಲೆಯ ಕಾರವಾರದ ಕದ್ರಾ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಕಾಳಿ ನದಿ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಮಹಾಮಾಯಿ ದೇವಸ್ಥಾನ ಜಲಾವೃತವಾಗಿದೆ.ಕದ್ರಾ – ಜೊಯಿಡಾ ಹೆದ್ದಾರಿಯ ಅಣಶಿ ಬಳಿ ಸಹ ಮಳೆಯಿಂದ ಗುಡ್ಡ ಕುಸಿದಿದೆ.
ಅಂಕೋಲಾದಲ್ಲಿ ಸುಂಕಸಾಳ ಬಳಿ ಗಂಗಾವಳಿ ನದಿ ಉಕ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಹುಬ್ಬಳ್ಳಿ – ಅಂಕೋಲಾ ಮಾರ್ಗ ಸಂಪೂರ್ಣ ಬಂದ್ ಆಗಿದ್ದು,ಯಲ್ಲಾಪುರ ಭಾಗದ ಅರೆಬೈಲ್ ಘಟ್ಟದಲ್ಲಿ ಗುಡ್ಡ ಕುಸಿತವಾಗಿ ಅಲ್ಲಿಯೂ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಇನ್ನು ಜೊಯಿಡಾದಲ್ಲಿ ಶಾಲೆಯೊಂದು ಕುಸಿದು ಬಿದ್ದಿದ್ದು,ಕಾತೇರಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ.ಶಿರಸಿ ನಗರದಲ್ಲಿ ಸಹ ಅಬ್ಬರದ ಮಳೆಗೆ ನಗರದ ಆದರ್ಶ ನಗರ,ಸಮೃದ್ಧಿ ನಗರ,ವಿಶಾಲನಗರ,ಪ್ರಗತಿ ನಗರ ಬಡಾವಣೆಯಲ್ಲಿ ರಸ್ತೆ,ಮನೆಗಳಲ್ಲಿ ನೀರು ನುಗ್ಗಿದೆ. ಶಿರಸಿ ತಾಲೂಕಿನ ಪ್ರಸಿದ್ಧ ಬಂಗಾರೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು,ಬನವಾಸಿ ಹಾಗೂ ಸಿದ್ದಾಪುರ ಭಾಗದಲ್ಲಿ ವರದಾ ನದಿ ಉಕ್ಕಿ 100 ಎಕರೆಗೂ ಹೆಚ್ಚು ಕೃಷಿ ಭೂಮಿ ಜಲಾವೃತವಾಗಿದೆ.
ಸಮುದ್ರ ತೀರದಲ್ಲಿ ಕಡಲಕೊರೆತ ಉಂಟಾಗಿದ್ದು,ಮೀನುಗಾರರ ಬಲೆ,ಬೋಟ್ ಗಳು ಕೊಚ್ಚಿ ಹೋಗಿವೆ.ಜಿಲ್ಲೆಯಾದ್ಯಂತ ಈವರೆಗೆ 18 ಮನೆಗಳು ಸಂಪೂರ್ಣ ಕುಸಿದಿದ್ದು, 200ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ.ಅಲ್ಲದೆ ಕಳೆದ ಹತ್ತು ದಿನದಲ್ಲಿ ಮಳೆಯಿಂದಾಗಿ ಯಲ್ಲಾಪುರ ಹಾಗೂ ಶಿರಸಿಯಲ್ಲಿ ತಲಾ ಓರ್ವರು ಸಾವನ್ನಪ್ಪಿದ್ದಾರೆ. 2019 ರಲ್ಲಿ ಪ್ರವಾಹ ಸೃಷ್ಟಿಯಾದ ಕಾರಣ ಜಲಾಶಯಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದ್ದು,ಎಚ್ಚರಿಕೆ ವಹಿಸಲಾಗಿದೆ.
ಜಿಲ್ಲೆಯ ಕರಾವಳಿ ತಾಲೂಕುಗಳುು ಸೇರಿದಂತೆ ಘಟ್ಟದ ಮೇಲಿನ ತಾಲೂಕು ಗಳಲ್ಲೂ ಎಡಬಿಡದೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು,ಜಲಾಶಯಗಳಿಗೆ ಯತೇಚ್ಛವಾಗಿ ನೀರು ಹರಿದು ಬರಲಾರಂಭಿಸಿದೆ.
ಇನ್ನು ಜಿಲ್ಲೆಯ ಜಲಾಶಯಗಳು ಭರ್ತಿಯಾಗಿದ್ದು ,ಕೊಡಸಳ್ಳಿ ಜಲಾಶಯದ 4 ಗೇಟ್ಗಳ ಮೂಲಕ 22,393 ಕ್ಯೂಸೆಕ್ಸ್ ಹಾಗೂ ಕದ್ರಾ ಜಲಾಶಯದಿಂದ ಒಟ್ಟು 8 ಗೇಟ್ ಗಳ ಮೂಲಕ 42,175 ಕ್ಯೂಸೆಕ್ಸ್ ನೀರನ್ನು ಕಾಳಿ ನದಿಗೆ ಹರಿಬಿಡಲಾಗಿದೆ.
ಉತ್ತರಕನ್ನಡದಲ್ಲಿ ವರುಣನ ಆರ್ಭಟ ಹೀಗೆಯೇ ಮುಂದುವರೆದಲ್ಲಿ ಹಲವು ಪ್ರದೇಶಗಳು ಪ್ರವಾಹದಿಂದ ಜಲಾವೃತವಾಗಿ ಗಂಡಾಂತರ ಸೃಷ್ಟಿಯಾಗುವ ಸಾಧ್ಯತೆ ಇದ್ದು,ಜನ ಭಯದಲ್ಲೇ ಕಾಲ ಕಳೆಯುವಂತಾಗಿದೆ.




