ಭಟ್ಕಳದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಶಾಂತಿ ಸಭೆ

ಕಾರವಾರ : ಬುಧವಾರ ಆಚರಿಸಲಾಗುವ ಬಕ್ರೀದ್ ಹಬ್ಬದ ನಿಮಿತ್ತ ಸಹಾಯಕ ಆಯುಕ್ತೆ ಮಮತಾದೇವಿ ನೇತೃತ್ವದಲ್ಲಿ ವಿವಿಧ ಧರ್ಮೀಯ ಮುಖಂಡರ ಶಾಂತಿ ಸಭೆ ಭಟ್ಕಳದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತರು, ಕೋವಿಡ್ ಮೂರನೇ ಅಲೆಯ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕಾಗಿದೆ. ಹಬ್ಬದ ಆಚರಣೆಯ ಹೆಸರಿನಲ್ಲಿ ಪುಟ್ಟ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ಯುವುದು ಬೇಡ. ಶಾಲಾ ಕಾಲೇಜು ಪರಿಸರ, ಆಟದ ಮೈದಾನ, ಉದ್ಯಾನವನ ಹಾಗೂ ಇತರೇ ಸಾರ್ವಜನಿಕ ಪ್ರದೇಶಗಳಲ್ಲಿ ಬಕ್ರೀದ್ ಬಲಿದಾನ ಕಾರ್ಯಕ್ಕೆ ಅವಕಾಶ ಇಲ್ಲ ಎಂದರು.
ಡಿವಾಯ್‍ಎಸ್ಪಿ ಕೆ.ಯು.ಬೆಳ್ಳಿಯಪ್ಪ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಬಿಂಬಿಸಲು ಹೋಗಬೇಡಿ. ಅಶಾಂತಿಗೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೂ ಅವಕಾಶ ಇಲ್ಲ ಎಂದು ಹೇಳಿದರು. ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ತಹಸೀಲ್ದಾರ ಎಸ್.ರವಿಚಂದ್ರ, ಭಟ್ಕಳ ಪುರಸಭಾ ಮುಖ್ಯಾಧಿಕಾರಿ ರಾಧಿಕಾ, ಎಸೈ ಸುಮಾ, ಎಸೈ ಭರತ್, ಎಸೈ ಹನುಮಂತ ಕುಡಗುಂಟಿ, ವಿಶ್ವ ಹಿಂದೂ ಪರಿಷತ್‍ನ ಶಂಕರ ಶೆಟ್ಟಿ, ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ ಎಸ್.ಎಮ್. ಫರ್ವೇಜ್, ಚೆನ್ನಪಟ್ಟಣ ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಧರ ಮೊಗೇರ, ತಾ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರ ದೇವಾಡಿಗ, ಶಾಂತಾರಾಮ ಭಟ್ಕಳ, ಭಟ್ಕಳ ಮುಸ್ಲಿಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಆಲ್ತಾಫ್ ಖರೂರಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.




