ಪೊಲೀಸ್ ವಾಹನವನ್ನೇ ಅಡ್ಡಗಟ್ಟಿ ಸೆರೆಸಿಕ್ಕ ದರೋಡೆಕೋರರು!

ಚಿಕ್ಕಮಗಳೂರು: ಮಾರಕಾಸ್ತ್ರಗಳನ್ನು ಹಿಡಿದು ನಿರ್ಜನ ಸ್ಥಳದ ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಅಣಿಯಾಗಿದ್ದ ತಂಡದ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ಅತ್ತ ಧಾವಿಸಿದಾಗ ಯಾವುದೋ ವಾಹನವೆಂದು ತಿಳಿದು ಪೊಲೀಸರ ವಾಹನವನ್ನೇ ಅಡ್ಡಗಟ್ಟಿದ ದರೋಡೆಕೋರರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸೆರೆಯಾದ ಸಿನಿಮೀಯ ಘಟನೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಎಂಬಲ್ಲಿ ನಡೆದಿದೆ.
ನಾಲ್ವರನ್ನು ಸೆರೆಹಿಡಿಯಲಾಗಿದ್ದು, ಆಗಂತುಕರ ಕೈಗಳಲ್ಲಿ 2 ಪಿಸ್ತೂಲು, ಡ್ರ್ಯಾಗರ್, ಕಬ್ಬಿಣದ ರಾಡ್, ಖಾರದ ಪುಡಿ, ಟಾರ್ಚ್ಗಳು ಸಿಕ್ಕಿವೆ. ಓರ್ವ ಆಸಾಮಿ ಸ್ಥಳದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆರೋಪಿಗಳ ಎರಡು ದ್ವಿಚಕ್ರ ವಾಹನಗಳು ಪೊಲೀಸರ ವಶವಾಗಿವೆ.
ಆರೋಪಿಗಳನ್ನು ಮಂಡ್ಯದ ಕುಮಾರ ಅಲಿಯಾಸ್ ಶಿವು (29), ಹೊಳೆನಸರಸೀಪುರದ ಕುಮಾರಸ್ವಾಮಿ (23), ಬೆಂಗಳೂರಿನ ಪೀಣ್ಯದ ಅಜಯ್ ಅಲಿಯಾಸ್ ಬಾಬು (25) ಹಾಗೂ ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದ ಶಿವಕುಮಾರ್ (40) ಎಂದು ಗುರುತಿಸಲಾಗಿದೆ.
ಸಿನಿಮೀಯ ಘಟನೆ: ಜು.18ರಂದು ಬೆಳಗಿನಜಾವ 2ಗಂಟೆಗೆ ದರೋಡೆಕೋರರ ತಂಡವು ಮುದ್ರೆಮನೆ ಎಂಬಲ್ಲಿ ತಿರುವು, ಹಂಪ್ಸ್ ಇರುವ ರಸ್ತೆಯಲ್ಲಿ ವಾಹನಗಳು ಬರುವುದನ್ನೇ ಕಾದು ಕುಳಿತಿತ್ತು. ಮೂಡಿಗೆರೆ ಠಾಣೆಯ ಪಿಎಸ್ಐ ರವಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಮುದ್ರೆಮನೆ ತಿರುವಿನ ಹಂಪ್ಸ್ ಬಳಿ ಯಾರೋ ನಾಲ್ಕೈದು ಮಂದಿ ವಾಹನ ಅಡ್ಡಗಟ್ಟುತ್ತಿದ್ದಾರೆಂಬ ಮಾಹಿತಿ ಸಿಕ್ಕಿದೆ. ತಕ್ಷಣ ಸಿಬ್ಬಂದಿಗಳೊಂದಿಗೆ ಅತ್ತ ಧಾವಿಸಿದಾಗ ಯಾವುದೋ ವಾಹನ ಬಂತೆಂದು ತಿಳಿದು ದರೋಡೆಕೋರರು ಪೊಲೀಸ್ ಜೀಪನ್ನೇ ಅಡ್ಡಗಟ್ಟಿದ್ದಾರೆ. ತಕ್ಷಣ ಪೊಲೀಸರು ನಾಲ್ವರನ್ನು ಹಿಡಿದಿದ್ದಾರೆ. ಇನ್ನೊಬ್ಬ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನಾಲ್ವರನ್ನು ಹಿಡಿದು ಯಾಕೆ ಈ ಸ್ಥಳದಲ್ಲಿದ್ದೀರಿ ಎಂದು ಕೇಳಿದಾಗ ಒಬ್ಬೊಬ್ಬರು ರೀತಿಯಲ್ಲಿ ಉತ್ತರಿಸಿದ್ದಾರೆ.

ತಿರುವು ಹಂಪ್ಸ್ ಇರುವ ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಚಲಿಸುವುದರಿಂದ ಹಾಗೂ ಮುಂದೆ ಫಾರೆಸ್ಟ್ ಇರುವುದರಿಂದ ರಾತ್ರಿವೇಳೆ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಸೂಕ್ತ ಸ್ಥಳವನ್ನೇ ಆರಿಸಿದ್ದ ಆಸಾಮಿಗಳು ತಾವು ಯೋಜಿಸಿದ್ದ ಕುಕೃತ್ಯ ನಡೆಸಲು ವಿಫಲರಾಗಿ ಈಗ ಕಂಬಿ ಎಣಿಸುತ್ತಾ ರಾಗಿಮುದ್ದೆ ಮುರಿಯುವಂತಾಗಿದೆ.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಸೋಮಶೇಖರ್, ಪಿಎಸ್ಐ ರವಿ, ಸಿಬ್ಬಂದಿಗಳಾದ ವೆಂಕಟೇಶ್ ಮೂರ್ತಿ, ತಿಮ್ಮಪ್ಪ, ಗಿರೀಶ್, ವಿಜಯಕುಮಾರ್, ದಯಾನಂದ್, ಲೋಹಿತ್, ಮಲ್ಲಿಕಾರ್ಜುನ್, ಚೇತನ್, ತೇಜುಮೂರ್ತಿ, ರುದ್ರೇಶ್, ಪ್ರೊ;ಪಿಎಸೈಗಳಾದ ಭರ್ಮಪ್ಪ ಬಿಳಗಲಿ, ಮಂಜುನಾಥ್ ಭಾಗವಹಿಸಿ, ದರೋಡೆಕೋರರಿಂದ ಮುಂದೆ ಆಗಲಿದ್ದ ಅನಾಹುತವನ್ನು ತಪ್ಪಿಸಿ, ಅವರ ವಿರುದ್ಧ ಕ್ರಮ ಜರುಗಿಸಿದ್ದು, ಈ ಕರ್ತವ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.




