Breaking NewsLatestರಾಷ್ಟ್ರೀಯ

22 ರಾಜ್ಯಗಳ ರೈತರಿಂದ ಪಾರ್ಲಿಮೆಂಟ್ ಹೊರಗೆ ಪ್ರತಿಭಟನೆ: ಕಿಸಾನ್ ಮೋರ್ಚಾ

ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶದ 22 ರಾಜ್ಯಗಳ ರೈತರು ಬರುವ ಜುಲೈ 22 ರಿಂದ ಆಗಸ್ಟ್ 13ರವರೆಗೆ ಸಂಸತ್ತಿನ ಹೊರಗೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆ ಎಂ) ಹೇಳಿದೆ.

ಸಂಸತ್ತಿನ ಮುಂಗಾರು ಅಧಿವೇಶನ ಸಂದರ್ಭದಲ್ಲಿ ಸರದಿಯಂತೆ ನಿತ್ಯ ಇನ್ನೂರು ರೈತರು ಶಾಂತಿಯುತವಾಗಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ನಲವತ್ತು ರೈತ ಸಂಘಟನೆಗಳ ಒಕ್ಕೂಟವಾದ ಎಸ್​ಕೆಎಂ ತಿಳಿಸಿದೆ. ಸಂಸತ್ತಿನ ಹೊರಗೆ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಈಗಾಗಲೇ ಪೂರ್ವಾನುಮತಿ ಪಡೆಯಲಾಗಿದೆ.

ಬರುವ ಜುಲೈ 26 ಮತ್ತು ಆಗಸ್ಟ್ 9ರಂದು ದೇಶಾದ್ಯಂತದಿಂದ ಆಗಮಿಸಲಿರುವ ರೈತಮಹಿಳೆಯರು ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಕೈಬಿಡಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿವೆ. ಜನತೆ ರೈತರ ಶಾಂತಿಯುವ ಹೋರಾಟವನ್ನು ಬೆಂಬಲಿಸುವಂತೆ ಸಂಘಟನೆ ಮನವಿ ಮಾಡಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿ ದೆಹಲಿ ಗಡಿ ಸುತ್ತಾ ಸಾವಿರಾರು ರೈತರು ಕಳೆದ ಕೆಲವು ತಿಂಗಳುಗಳಿಂದ ನಿರಂತರ ಪ್ರತಿಭಟನೆ ಹಮ್ಮಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತ ಮುಖಂಡರೊಂದಿಗೆ ನಡೆಸಿದ 10ಕ್ಕೂ ಹೆಚ್ಚು ಸುತ್ತಿನ ಮಾತುಕತೆ ಈವರೆಗೆ ಫಲ ನೀಡಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button