ಉತ್ತರ ಕನ್ನಡ

ಹೊನ್ನಾವರ : ತೊಪ್ಪಲಕೇರಿಯಲ್ಲಿ ಕಡಲ್ಕೊರೆತ

ತೇಜಸ್ವಿ ಬಿ.ನಾಯ್ಕ

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ತೊಪ್ಪಲಕೇರಿಯಲ್ಲಿ ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗಿ ಸುಮಾರು ಮೂರು ಕಿಲೋಮೀಟರ್ ನಷ್ಟು ತಡೆಗೋಡೆ ಕುಸಿದು ಅಲೆಗಳ ರಭಸಕ್ಕೆ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪರಿಣಾಮ ಸಮುದ್ರದ ಕೆನ್ನಾಲಿಗೆ ತೊಪ್ಪಲಕೇರಿಯನ್ನು ವ್ಯಾಪಿಸಿಕೊಂಡಿದ್ದು, ಅಲ್ಲಿರುವ ಗ್ರಾಮಸ್ಥರು ಹಗಲು, ರಾತ್ರಿ ಜೀವ ಕೈಯಲ್ಲಿ ಹಿಡಿದುಕೊಂಡು ಭಯದಿಂದ ಬದುಕುವಂತಾಗಿದೆ.

ತೊಪ್ಪಲಕೇರಿ ಮಜರೆಯು ಶರಾವತಿ ಹಾಗೂ ಅರಬ್ಬೀ ಸಮುದ್ರ ಸೇರುವ ಸಂಘಮ ಪ್ರದೇಶವಾಗಿದೆ. ಈ ಸಮುದ್ರ ತೀರದಲ್ಲಿ 100 ರಷ್ಟು ಕುಟುಂಬಗಳು ವಾಸಿಸುತ್ತಿವೆ. ಇವರಲ್ಲಿ ಹೆಚ್ಚಿನವರು ತೀರಾ ಬಡವರಾಗಿದ್ದು,ಕೂಲಿ ನಾಲಿ ಮಾಡಿ ಬದುಕು ಕಟ್ಟಿಕೊಂಡವರಾಗಿದ್ದಾರೆ. ಇಲ್ಲಿರುವ ಮನೆಗಳು ಬಹುತೇಕ ಮಣ್ಣಿನಿಂದ ನಿರ್ಮಿಸಿದವುಗಳಾಗಿವೆ.ಕಡಲ್ಕೊರೆತಕ್ಕೆ ಶಿಲೆಕಲ್ಲಿನಿಂದ ನಿರ್ಮಿಸಿದ ತಡೆಗೋಡೆ ಕುಸಿದು ಹೋಗಿ ಸಮುದ್ರದ ಅಲೆಗಳ ರಭಸಕ್ಕೆ ಬಹುದೂರಕ್ಕೆ ಹೋಗಿ ಬಿದ್ದಿವೆ. ಹೀಗಾಗಿ ಸಮುದ್ರ ನೀರು ಮನೆಯಂಗಳಕ್ಕೆ ಮತ್ತು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ತೆರೆದ ಕುಡಿಯುವ ನೀರಿನ ಬಾವಿಗಳಿಗೆ ಸಮುದ್ರದ ಉಪ್ಪುನೀರು ನುಗ್ಗಿ ನೀರುಪಯೋಗಿಯಾಗಿದೆ. ಸಮುದ್ರದ ನೀರು ಉಪ್ಪು ನೀರಾಗಿರುವುದರಿಂದ ತೋಟದಲ್ಲಿ ಫಸಲಿಗೆ ಬಂದು ನಿಂತಿರುವ ಅಡಿಕೆ ಮತ್ತು ತೆಂಗಿನ ಮರಗಳಿಗೆ ಹಾನಿ ಸಂಭವಿಸಿದೆ. ಇಲ್ಲಿನ ಗ್ರಾಮಸ್ಥರಿಗೆ ಬಿ.ಪಿ.ಎಲ್. ಪಡಿತರ ಚೀಟಿ ಇದ್ದರೂ, ಈ ಸಮುದ್ರ ತೀರವು ಸಿ.ಆರ್.ಝಡ್. ವ್ಯಾಪ್ತಿಗೆ ಬರುವುದರಿಂದ ಗೃಹ ನಿರ್ಮಾಣಕ್ಕೆ ಸರಕಾರದಿಂದ ಯಾವೊಂದು ಸೌಲಭ್ಯವೂ ದೊರಕುತ್ತಿಲ್ಲ.

ಹೊನ್ನಾವರದ ಶರಾವತಿ ಮತ್ತು ಬಡಗಣಿ ನದಿಗಳ ಸಂಘಮದ ಅಳಿವೆ ಇದಾಗಿದೆ. ಈ ಅಳಿವೆಯ ಎಡಭಾಗದಲ್ಲಿ (ದಕ್ಷಿಣಕ್ಕೆ) ಕಾಸರಕೋಡ ಟೊಂಕಾ (SAND SPIT) ಹಾಗೂ ಬಲಭಾಗದಲ್ಲಿ ಉತ್ತರಕ್ಕೆ ಪಾವಿನಕುರ್ವೆ ಪ್ರದೇಶವಿದೆ. ಅಳಿವೆಯ ಹಿಂಭಾಗದಲ್ಲಿ ಕರ್ಕಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಒಳಪಡುವ ತೊಪ್ಪಲಕೇರಿ ಪ್ರದೇಶವಿದೆ. ಈ ಪ್ರದೇಶದ ಉದ್ದಕ್ಕೂ ಸಾರ್ವಜನಿಕರ ಮನೆ, ಕುಡಿಯುವ ನೀರಿನ ಬಾವಿ, ತೋಟವಿದ್ದು, 2017 ನೇ ಸಾಲಿನ ಮಳೆಗಾಲದಲ್ಲಿ ಕಾಸರಕೋಡ (SAND SPIT) ನ ತುದಿಯ ಸುಮಾರು 250 ಮೀಟರ್ ಉದ್ದದ ಪ್ರದೇಶವು ಕೊಚ್ಚಿಹೋಗಿ ಅಳಿವೆಯ ಅಗಲವು ಸುಮಾರು 500 ಮೀಟರ್ ಗಿಂತ ಹೆಚ್ಚಾಗಿರುತ್ತದೆ. ಈ ಕಾರಣಕ್ಕೆ ದೈತ್ಯ ಗಾತ್ರದ ಸಮುದ್ರದ ಅಲೆಗಳು ರಭಸದಿಂದ ಮುನ್ನುಗ್ಗಿ ನೇರವಾಗಿ ತೊಪ್ಪಲಕೇರಿ ಪ್ರದೇಶಕ್ಕೆ ಅಪ್ಪಳಿಸುತ್ತಿದೆ.

ಬಹಳ ವರ್ಷಗಳ ಹಿಂದೆ ಶರಾವತಿ ನದಿಯ ಬಲದಂಡೆ ಗುಂಟ ಮತ್ತು ಬಡಗಣಿ ನದಿಯ ಎಡದಂಡೆ ಗುಂಟ ಲ್ಯಾಟ್ ರೈಟ್ ಕಲ್ಲುಗಳ ಮೇಲೆ ಗ್ರಾನೈಟ್ ಕಲ್ಲಿನ APRON ನಿರ್ಮಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಅಲೆಗಳ ರಭಸಕ್ಕೆ ಈ ಸಂರಕ್ಷಣಾ ಗೋಡೆಯು ಸುಮಾರು ಮೂರು ಕಿಲೋಮೀಟರ್ ಉದ್ದಕ್ಕೆ ಕುಸಿದಿರುವುದರಿಂದ ಸಮುದ್ರದ ನೀರು ಸಾರ್ವಜನಿಕರ ಬಾವಿ,ಮನೆ ಮತ್ತು ತೋಟಗಳಿಗೆ ಮುನ್ನುಗ್ಗಿ ಈಗಾಗಲೇ ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ.

ಈ ಪ್ರದೇಶದಲ್ಲಿ ಮುಂದಿನ ಮಳೆಗಾಲದಲ್ಲಿ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಮೂರು ಕಿಲೋಮೀಟರ್ ಉದ್ದಕ್ಕೆ ದೀರ್ಘಕಾಲಿಕ ಪ್ರತಿಬಂಧಕ ಕಾಮಗಾರಿಯನ್ನು ಈ ಪ್ರದೇಶದಲ್ಲಿ 400 ಮೀಟರ್ ಉದ್ದಕ್ಕೂ ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಯನ್ನು ನಿರ್ಮಿಸುವ ಅಂದಾಜು ಪಟ್ಟಿಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಕಾಮಗಾರಿ ವಿಳಂಭವಾಗುತ್ತಿರುವುದಕ್ಕೆ ಇಲ್ಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.ಒಟ್ಟಾರೆಯಾಗಿ ಇಲ್ಲಿನ ಗ್ರಾಮಸ್ಥರನ್ನು ಬೇರೆಡೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವುದೊಂದೆ ಶಾಶ್ವತ ಪರಿಹಾರವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button