ಗಣಿ ಸಚಿವರ ಕ್ಷೇತ್ರದ ಪಿಡಿಓ ಸರ್ವಾಧಿಕಾರಿ ಧೋರಣೆ; ಅಧ್ಯಕ್ಷ, ಸದಸ್ಯರ ಖಂಡನೆ

ಬಾಗಲಕೋಟೆ: ಗಣಿ ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದ ಬೀಳಗಿ ತಾಲೂಕಿನ ಕೊರ್ತಿ ಗ್ರಾಮ ಪಂಚಾಯತಿ ಪಿಡಿಓ ಸರ್ವಾಧಿಕಾರಿ ಧೋರಣೆಗೆ ಅಧ್ಯಕ್ಷ, ಸದಸ್ಯರು ಖಂಡಿಸಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಕೊರ್ತಿ ಪಿಡಿಓ ಶ್ರೀಮತಿ ಎಂ ಎಂ ಭೋಸಗೊಂಡ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.
ತಮ್ಮದೇ ನಿಯಮ, ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡದೇ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಜೊತೆಗೆ ಸರ್ಕಾರದಿಂದ ಬಂದಂತಹ ಅನುದಾನದ ಬಗ್ಗೆ ಅಧ್ಯಕ್ಷ,ಸದಸ್ಯರಿಗೆ ಯಾವುದೇ ಮಾಹಿತಿ ನೀಡೋದಿಲ್ಲ. 5ಲಕ್ಷ ಕಾಮಗಾರಿ ಯೋಜನೆ ಕುರಿತು ಸಭೆ ನಡೆಸದೇ ಕಾಮಗಾರಿ ಮಾಡೋಕೆ ಹೊರಟಿದ್ದಾರೆ. ಈ ಬಗ್ಗೆ ಕೇಳೋಕೆ ಹೋದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಜನರಿಗೆ ಮರ್ಯಾದೆ ಇಲ್ಲದಂತೆ ಮಾತನಾಡುತ್ತಾರೆ ಹಾಗೂ ಯಾವುದೇ ಕೆಲಸದ ಮೇಲೆ ಫೋನ್ ಮಾಡಿದರೂ ಸಂಪರ್ಕಕ್ಕೆ ಸಿಗುವುದಿಲ್ಲ. ಏಳು ತಿಂಗಳಿನಿಂದ ದರ್ಪ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.ಇನ್ನೂ ಏನಾದರೂ ಕೇಳಿದರೆ ಬೇಕಾಬಿಟ್ಟಿ ಉತ್ತರ ಕೊಡುತ್ತಾರೆ ಮರ್ಯಾದೆ ಇಲ್ಲದಂತೆ ಮಾತನಾಡುತ್ತಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ತಿಳಿಸಿದರು ಕೂಡ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಎಲ್ಲಾ ಕೆಲಸ ಅವರೇ ಮಾಡಲಿ. ಗ್ರಾಮ ಪಂಚಾಯತಿ ಸದಸ್ಯರೆಲ್ಲರೂ ರಾಜೀನಾಮೆ ಕೊಡುತ್ತೇವೆ ಎಂದಿರುವ ಗ್ರಾಮ ಪಂಚಾಯಿತಿ ಸದಸ್ಯರು, ಸರ್ವಾಧಿಕಾರದಿಂದ ನಡೆದುಕೊಳ್ಳುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
