ಕಷ್ಟ ಬಂದಿದೆ ಅಂತ ಹೆಂಡ್ತಿ ಮಕ್ಕಳನ್ನ ಬಿಡೋಕ್ಕಾಗುತ್ತಾ?: ನಿರ್ಮಾಪಕ ಸೂರಪ್ಪ ಬಾಬು

ಪೂರ್ಣ ವಿ-ರಾಮ
ಕೊರೋನಾ ಕಾಟಕ್ಕೆ ಇಡೀ ಚಿತ್ರರಂಗ ರೋಸಿ ಹೋಗಿದೆ. ದಿನಬೆಳಗಾದರೆ ಸಿನೆಮಾ ಮಾಡಿಕೊಂಡು ಕೂತವರ, ಕೋಟಿ ಕೋಟಿ ಇನ್ವೆಸ್ಟ್ ಮಾಡಿ ನಿಂತವರ ಪಾಡು ಹೇಳತೀರದು. ಅತ್ಲಾಗೆ ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದಕ್ಕೆ ಸರ್ಕಾರ ಥಿಯೇಟರ್ ಓಪನ್ ಮಾಡುವ ಬಗ್ಗೆಯೂ ಚಕಾರ ಎತ್ತುತ್ತಿಲ್ಲ. ಇತ್ಲಾಗೆ ಓಟಿಟಿ (ಅಮೆಜಾನ್-ನೆಟ್ ಫ್ಲಿಕ್ಸ್ ಮೊದಲಾದ ವೇದಿಕೆ) ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡೋಣ ಎಂದರೆ ಹೂಡಿಕೆ ಮಾಡಿರುವುದು ಕೋಟಿ ಕೋಟಿ ಹಣ. ಅಷ್ಟು ವಾಪಸ್ ಬರುತ್ತಾ ಎಂಬ ನಂಬಿಕೆ ಇಲ್ಲ. ಅದರಲ್ಲೂ ದೊಡ್ಡ ಸಿನೆಮಾ ನಿರ್ಮಾಪಕರ ಕಾಡಂತೂ ಯಾರಿಗೂ ಬೇಡ. ಈ ಕಷ್ಟ-ಕ್ಲಿಷ್ಟ-ಸಂಕಷ್ಟ ಸಮಯದಲ್ಲಿ ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರನ್ನ ಬಿಎಂಜಿ 24x7livekannada ಮಾತನಾಡಿಸಿದಾಗ ಅವರು ಅಳಲು ತೋಡಿಕೊಂಡಿದ್ದು ಹೀಗೆ!
-ಸೂರಪ್ಪ ಬಾಬು ಅವರೇ…ಐವತ್ತು ಅರವತ್ತು ಕೋಟಿ ಇನ್ವೆಸ್ಟ್ ಮಾಡಿರೊ ನಿಮ್ಮಂಥ ನಿರ್ಮಾಪಕರ ಕಥೆ ಹೇಗೆ?
ಸೂರಪ್ಪ ಬಾಬು: ಗೊತ್ತಿಲ್ಲ ಸ್ವಾಮಿ. ದಿನ ಬೆಳಗಾದರೆ ಭಯ ಆಗುತ್ತಿದೆ. ಸುದೀಪ್ ಅಂತ ನ್ಯಾಷನಲ್ ನಟನನ್ನ ಇಟ್ಟುಕೊಂಡು ಐವತ್ತಕ್ಕೂ ಹೆಚ್ಚು ಕೋಟಿ ಹೂಡಿದ್ದೀನಿ. ಇವತ್ತು ಥಿಯೇಟರ್ ಓಪನ್ ಆಗಬಹುದು, ನಾಳೆ ಆಗಬಹುದು, ನಾಡಿದ್ದು ಆಗಬಹುದು ಅಂತ ದಿನ ದೂಡುತ್ತಲೇ ಇದ್ದೇವೆ!
-ಸರ್ಕಾರಕ್ಕೆ ನೀವೆಲ್ಲಾ ಸೇರಿ ಮನವಿ ಸಲ್ಲಿಸಬಹುದಲ್ವಾ?!
ಸೂರಪ್ಪ ಬಾಬು: ಏನಂತ ಕೊಡೋದು? ಕೊರೋನಾ ಬಗ್ಗೆ, ಮೂರನೇ ಅಲೆ ಬಗ್ಗೆ ಯಾರಿಗೂ ಕ್ಲಾರಿಟಿ ಇಲ್ಲ. ಮಾನ್ಯ ಮುಖ್ಯಮಂತ್ರಿಗಳಂತೂ ಥೀಯೇಟರ್ ಓಪನ್ ಬಗ್ಗೆ ಇನ್ನೂ ಒಂದು ನಿರ್ಧಾರಕ್ಕೆ ಬಂತಂತೆ ಕಾಣುತ್ತಿಲ್ಲ. ನಾವೇನು ನಿರ್ಮಾಪಕ ವಲಯ ಅಂತ ಇದ್ದೀವಿ, ಎರಡನೇ ಅಲೆ ಶುರುವಿಗೂ ಮುನ್ನ ಪೊಗರು, ರಾಬರ್ಟ್ ಸಿನೆಮಾವನ್ನ ಜೊತೆಗೂಡಿ ಹೊರತರಲು ಓಡಾಡಿದೆವು. ಅದರಲ್ಲಿ ಯಶಸ್ವಿಯಾದೆವು, ಇನ್ನೇನು ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ಯುವರತ್ನ ಬಿಡುಗಡೆ ಆಯಿತು. ಬಿಡುಗಡೆಯಾದ ಎರಡೇ ದಿನದಲ್ಲಿ ಎರಡನೇ ಅಲೆ ಎದ್ದು, ಮತ್ತೆ ಲಾಕ್ ಡೌನ್ ಮಾಡುವ, ಥಿಯೇಟರ್ ಕ್ಲೋಸ್ ಮಾಡುವ ಪರಿಸ್ಥಿತಿ ಬಂತು. ಯುವರತ್ನ ಚೆನ್ನಾಗಿಯೇ ಇದ್ದರೂ ಥಿಯೇಟರ್ ನಿಂದ ತೆಗೆಯುವ ಪರಿಸ್ಥಿತಿ ಎದುರಾಯಿತು. ಈಗ ನಾವು ಮತ್ತೆ ಪ್ಲಾನ್ ಮಾಡಿಕೊಂಡು, ಕೋಟ್ಯಂತರ ಖರ್ಚು ಮಾಡಿ, ಥಿಯೇಟರ್ ಸೆಟಪ್ ಗೆ ಓಡಾಡಿದ್ವಿ ಅಂದ್ಕೊಳ್ಳಿ. ಮೂರನೇ ಅಲೆ ಅಂತ ಶುರುವಾದ್ರೆ ಏನು ಮಾಡುವುದು?
-ದೊಡ್ಡ ದೊಡ್ಡ ಸಿನೆಮಾ ನಿರ್ಮಾಪಕರೆಲ್ಲಾ ಸೇರಿ ಒಂದು ಮೀಟಿಂಗ್ ಮಾಡಬಹುದಲ್ಲಾ?
ಸೂರಪ್ಪ ಬಾಬು: ದೇವರಾಣೆ ಗೊತ್ತಾಗ್ತಿಲ್ಲ. ಥಿಯೇಟರ್ ಓಪನ್ ಮಾಡಬಹುದು ಅಂತ ಸರ್ಕಾರ ಆದೇಶ ಹೊರಡಿಸಿದರೆ ವಿತರಕ ವಲಯದವರು ನಮ್ಮನ್ನ ಸಂಪರ್ಕ ಮಾಡ್ತಾರೆ. ನಾವು ಏನೋ ಒಂದು ವ್ಯವಸ್ಥೆ ವ್ಯಾಪಾರ ವಹಿವಾಟು ಅಂತ ಓಡಾಡಬಹುದು. ಎಲ್ಲವೂ ಬ್ಲ್ಯಾಂಕ್ ಇದೆ. ಇನ್ನೇನು ಮಾಡೋಕೆ ಸಾಧ್ಯ ಹೇಳಿ?
-ಮುಂದಿನ ಹಾದಿ ಹೆಂಗೆ ಹೀಗಾದ್ರೆ?
ಸೂರಪ್ಪ ಬಾಬು: ನೋಡಿ, ಮದುವೆ ಮಕ್ಕಳು ಅಂತ ಮಾಡಿಕೊಂಡಮೇಲೆ ಕಷ್ಟ ಅಂತ ಅವರನ್ನ ದೂರ ಮಾಡೋಕೆ ಆಗುತ್ತಾ? ಕಟ್ಟಿಕೊಂಡಿರೋ ಹೆಂಡತಿಯನ್ನ ಬಿಟ್ಟೋಗು ಅಂತೀವಾ? ಅದೇ ರೀತಿ ಈ ವ್ಯವಸ್ಥೆ. ಸಿನೆಮಾವನ್ನ ಮಾಡಿಯಾಗಿದೆ. ಏನಾಗುತ್ತೋ ಅಲ್ಲಿತನಕ ಕಾಯ್ತೀವಿ, ಜೊತೆಗೇ ಇರ್ತೀವಿ. ಮಡದಿ ಮಕ್ಕಳಂತೇ ಜೋಪಾನ ಮಾಡ್ತೀವಿ. ನೋ ಮೋರ್ ಕಾಮೆಂಟ್ಸ್!




