ಆಲೂಗಡ್ಡೆ ಬೇಯಿಸುವ ಮುನ್ನ…

ಪವಿತ್ರಾ
ಬಹುಜನರ ಫೇವರಿಟ್ ತರಕಾರಿ ಆಲೂಗಡ್ಡೆಯ ವೈವಿಧ್ಯಮಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಅದಕ್ಕೂ ಮುನ್ನ ಅಲೂಗಡ್ಡೆಯನ್ನು ಬೇಯಿಸಿಕೊಳ್ಳುವುದು ಅನಿವಾರ್ಯ. ಅಲೂಗಡ್ಡೆ ಬೇಯಿಸುವ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ ಕೇಳಿ.
ಮಾರುಕಟ್ಟೆಯಿಂದ ತಂದ ಆಲೂಗಡ್ಡೆಯನ್ನು ಮೊದಲು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಆಲೂಗಡ್ಡೆ ದೊಡ್ಡದಿದ್ದರೆ ಅದನ್ನು ಎರಡು ಭಾಗಕ್ಕೆ ಕತ್ತರಿಸಿಕೊಳ್ಳಿ. ಸಣ್ಣ ಗಾತ್ರದ್ದಾದರೆ ನೇರವಾಗಿ ಬೇಯಿಸುವ ಪಾತ್ರೆಗೆ ಹಾಕಿ.
ಸಿಪ್ಪೆ ತೆಗೆದು ಬೇಯಿಸುವುದರಿಂದ ಆಲೂಗಡ್ಡೆಯ ಕೆಲವು ಪೋಷಕಾಂಶಗಳು ನಷ್ಟವಾಗುತ್ತವೆ ಎನ್ನಲಾಗಿದೆ. ಹಾಗಾಗಿ ಬೆಂದ ಬಳಿಕವೇ ಸಿಪ್ಪೆ ತೆಗೆಯಿರಿ. ಸಣ್ಣ ತುಂಡುಗಳಾಗಿ ಕತ್ತರಿಸಿದ ಬಳಿಕ ಬೇಯಿಸುವುದಾದರೆ ಮಾತ್ರ ಮೊದಲೇ ಸಿಪ್ಪೆ ತೆಗೆದಿಟ್ಟುಕೊಳ್ಳಿ.
ಆಲೂಗಡ್ಡೆ ಬೇಯಿಸಲು ಕುಕ್ಕರ್ ಬಳಸುವುದು ಹೆಚ್ಚು ಸೂಕ್ತ. ಮೂರು ವಿಷಲ್ ಗೆ ಬಟಾಟೆ ಮೃದುವಾಗಿ ಉತ್ತಮವಾಗಿ ಬೇಯುತ್ತದೆ. ಬೇಯಲು ಇಡುವಾಗ ನೀರಿಗೆ ಒಂದು ಚಮಚ ಉಪ್ಪು ಹಾಗೂ ಚಿಟಿಕೆ ಅರಶಿನ ಸೇರಿಸಲು ಮರೆಯದಿರಿ.
ಕುಕ್ಕರ್ ನಿಂದ ಹೊರತೆಗೆದ ಬಳಿಕ ತಣ್ಣಗಿನ ನೀರಿನಲ್ಲಿ ಮುಳುಗಿಸಿ. ಇದು ಸಿಪ್ಪೆ ತೆಗೆಯುವ ಪ್ರಕ್ರಿಯೆಯನ್ನು ಸುಲಭವಾಗಿಸುತ್ತದೆ ಮಾತ್ರವಲ್ಲ ಆಲೂಗಡ್ಡೆಯನ್ನು ಸಣ್ಣ ಸಣ್ಣ ಹೋಳುಗಳಾಗಿ ಮಾಡಲು ನೆರವಾಗುತ್ತದೆ.




