ವೃದ್ದೆ ಕೊಲೆ ಪ್ರಕರಣಕ್ಕೆ ರೋಚಕ ಅಂತ್ಯ; ಆರೋಪಿ ಮೊಮ್ಮಗ ಮಂಜುನಾಥ್ ಪೊಲಿಸರ ಬಲೆಗೆ

ಮಡಿಕೇರಿ: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಜೂರು ಗ್ರಾಮದಲ್ಲಿ ನಡೆದ ವೃದ್ಧೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಒಬ್ಬ ವ್ಯಕ್ತಿಯ ದೇಹ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕ್ಕದ್ದಮೆ ದಾಖಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ವಿಷಯದ ಕುರಿತು ಸಂಚಲನ ಏರ್ಪಟ್ಟಿತು. ಸದರಿ ಪ್ರಕರಣ ಮೇಲ್ನೋಟಕ್ಕೆ ಕಳ್ಳತನ ಮಾಡುವ ಸಲುವಾಗಿ ಕೊಲೆ ನಡೆದಿರಬಹುದು ಎಂಬು ಕಂಡುಬಂದಿದ್ದು, ಈ ಪ್ರಕರಣವನ್ನು ಬೇಧಿಸುವ ಸಲುವಾಗಿ ಕೊಡಗು ಪೊಲೀಸ್ ಅಧೀಕ್ಷಕರು, ಸೋಮವಾರಪೇಟೆ ಉಪಾಧೀಕ್ಷಕರ ನೇತೃತ್ವದಲ್ಲಿ ಕುಶಾಲನಗರ, ವೃತ್ತ ವೀಕ್ಷಕರು, ಕುಶಾಲನಗರ ಗ್ರಾಮಾಂತರ ಪಿಎಸ್‌ಐ ಹಾಗೂ ಸಿಬ್ಬಂದಿಯವರನ್ನು ಒಳಗೊಂಡಂತೆ ತಂಡವನ್ನು ರಚನೆ ಮಾಡಿದ್ದರು.
ಈ ಕೊಲೆಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ತಂಡ, ವೃದ್ಧೆಯ ಚನವಲನಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ವೃದ್ದೆಯ ಸಂಬಂಧಿಕರುಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆರೋಪಿಯ ಬಗ್ಗೆ ಸುಳಿವು ದೊರೆತಿದ್ದು, ಅರೆಸ್ಟ್ ಮಾಡಿದ್ದಾರೆ. ಈ ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಆರೋಪಿಯು ಕೊಲೆಯಾದ ಗೌರಮ್ಮಳ ಮೊಮ್ಮಗ ಮಂಜುನಾಥನೇ ಆಗಿದ್ದಾನೆ. ಮಂಜುನಾಥ್ ಎಸ್ ಎಲ್ ಎನ್ ಕಾಫಿ ಸಂಸ್ಥೆಯಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದ.
ಈ ಪ್ರಕರಣವನ್ನು ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ಕೊಡಗು ಪೋಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ನಗದು ಬಹುಮಾನವನ್ನು ಘೋಷಿಸಿದ್ದಾರೆ.




