ನಾನಾಗಲಿ, ನನ್ನ ಮಗ ಹರೀಶ್ಗೌಡ ಎಲ್ಲೇ ನಿಂತರೂ ಗೆಲ್ಲುತ್ತೇವೆ: ಶಾಸಕ ಜಿ ಟಿ ದೇವೇಗೌಡ

ಮೈಸೂರು: ನಾನಾಗಲಿ, ನನ್ನ ಮಗ ಹರೀಶ್ಗೌಡ ಎಲ್ಲೇ ನಿಂತರೂ ಗೆದ್ದೇ ಗೆಲ್ಲುತ್ತೇವೆ. ಜನರ ವಿಶ್ವಾಸ, ಧೈರ್ಯದಿಂದ ಪಕ್ಷವೇ ಬೇಕಾಗಿಲ್ಲ. ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೂ ಜಯಗಳಿಸುವ ವಿಶ್ವಾಸವಿದೆ. ಜನರ ಅಭಿಪ್ರಾಯ ಪಡೆಯದೆ ಯಾವುದೇ ರಾಜಕೀಯ ತೀರ್ಮಾನ ಮಾಡುವುದು ಇಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೊಸ ರಾಜಕೀಯ ಬಾಂಬ್ ಸಿಡಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರು ಮನೆಗೆ ಬಂದು ಮುಂದೆ ಏನು ಮಾಡಬೇಕು, ಯಾವ ರಾಜಕೀಯ ತೀರ್ಮಾನ ಮಾಡುತ್ತೀರಿ ಎಂದು ಕೇಳುತ್ತಿದ್ದಾರೆ. ಪಕ್ಷವೇ ಬೇಕಾಗಿಲ್ಲ. ಸ್ವತಂತ್ರವಾಗಿ ನಿಂತರೆ ನಾವು ಗೆಲ್ಲಿಸುತ್ತೇವೆಂದು ಹೇಳುತ್ತಿದ್ದಾರೆ. ಜನರ ವಿಶ್ವಾಸ, ಧೈರ್ಯ ನೋಡಿದರೆ ಎಲ್ಲಾದರೂ ನಿಂತು ಗೆಲ್ಲುವ ನಂಬಿಕೆ ಇದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ನನ್ನ ಮಗ ಹರೀಶ್ಗೌಡ ಎಲ್ಲಾದರೂ ನಿಂತರೆ ಗೆಲ್ಲುತ್ತಾನೆ. ಅದು ಹುಣಸೂರು, ಕೆ.ಆರ್.ನಗರ, ಚಾಮರಾಜ ಕ್ಷೇತ್ರದಲ್ಲೂ ನಿಂತರೂ ಗೆಲ್ಲುತ್ತಾನೆ ಎಂದು ಎಂದು ತಮ್ಮ ವಿರೋಧಿಗಳಿಗೆ ನೇರವಾದ ಸವಾಲು ಹಾಕಿದರು.
ಎರಡು ವರ್ಷದಿಂದ ಜಾ.ದಳದ ಸಭೆ, ಕಾರ್ಯಕ್ರಮಗಳಿಗೆ ಭಾಗಿಯಾಗಿಲ್ಲ. ಬೇರೆ ಪಕ್ಷಕ್ಕೂ ಹೋಗಿಲ್ಲ. ಗುರುತಿಸಿಕೊಳ್ಳದೆ ನನ್ನ ಪಾಡಿಗೆ ನಾನಿದ್ದೇನೆ. 17 ಜನ ಶಾಸಕರು ಬಿಜೆಪಿಗೆ ಹೋದಾಗಲೇ ನಾನು ಹೋಗಿ ಮಂತ್ರಿ ಆಗಬಹುದಾಗಿತ್ತು. ಆದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರ ಪರ್ವ ಸಮಾವೇಶ ಮಾಡಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಮಾಡುತ್ತೇನೆಂದು ಹೇಳಿ ಸಿಎಂ ಮಾಡಿದ್ದೇವೆ. ಅವರನ್ನು ಇಳಿಸಬಾರದೆಂದು ಮನಸ್ಸು ಒಪ್ಪಲಿಲ್ಲ. ದೇವರು, ಜನರು ಒಪ್ಪಲ್ಲವೆಂದು ಹೇಳಿ ಹೋಗಲಿಲ್ಲ ಎಂದು ಹೇಳಿದರು.
ಹರೀಶ್ಗೌಡರನ್ನು ಹುಣಸೂರು ಉಪ ಚುನಾವಣೆಗೆ ನಿಲ್ಲಿಸಬೇಕೆಂಬ ಮಾತನ್ನು ಹೇಳಿದಾಗ ನಿಲ್ಲಿಸಲ್ಲ. ಅಲ್ಲಿ ಕಾಂಗ್ರೆಸ್ ಗೆದ್ದಾಯ್ತು ಅಂತ್ಹೇಳಿ ಬಂದೆ.ಅದರಂತೆ ಮಂಜುನಾಥ್ ಗೆದ್ದರು. ಅಲ್ಲಿಂದ ಇಲ್ಲಿಯ ತನಕ ಜಾ.ದಳದ ನಾಯಕರೊಂದಿಗೆ ಸಂಪರ್ಕ ಇಟ್ಟುಕೊಂಡಿಲ್ಲ ಎಂದು ತಿಳಿಸಿದರು.
