ಈಜು ಗುರುವಾಗಿ ಕರುನಾಡ ಚಿನ್ನದ ಮೀನು ಗಗನ್

ಸೋಮಶೇಖರ್ ಪಡುಕರೆ, ಬೆಂಗಳೂರು
ದಶಕಗಳ ಹಿಂದೆ ಕರ್ನಾಟಕದ ಚಿನ್ನದ ಮೀನು ಎಂದೇ ಖ್ಯಾತಿ ಪಡೆದು, 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಈಜುಗಾರ ಎಂಬ ಗೌರವ ಹೊಂದಿರುವ, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ದಾಖಲೆಯ ಪದಕಗಳನ್ನು ಗೆದ್ದಿರುವ ಒಲಂಪಿಯನ್ ಈಜುಗಾರ ಗಗನ್ ಉಳ್ಳಾಲಮಠ್ ಈಗ ತನ್ನಂತೆಯೇ ಇತರ ಈಜುಗಾರರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವುದಕ್ಕಾಗಿ ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ ಈಜು ಕೋಚ್ ಆಗಿ ಸೇರ್ಪಡೆಯಾಗಲಿದ್ದಾರೆ.
ಗಗನ್ ಅವರ ಈ ತೀರ್ಮಾನ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಈಗಾಗಲೇ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಅವರು ಉತ್ತಮ ರೀತಿಯಲ್ಲಿಯೇ ಬದುಕನ್ನು ನಿಭಾಯಿಸುತ್ತಿದ್ದರು. ಆದರೆ ತನ್ನ ಅನುಭವವನ್ನು ಇತರರಿಗೆ ನೀಡಿ ಅವರು ತನ್ನಂತೆಯೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರಲಿ, ಈಜಿನಲ್ಲಿ ಬದುಕನ್ನು ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಸರಕಾರದ ಕ್ರೀಡಾ ಸಂಸ್ಥೆ ‘ಸಾಯಿ’ಯೊಂದಿಗೆ ಕೈ ಜೋಡಿಸಿದ್ದಾರೆ. ಲಂಡನ್ ಒಲಿಂಪಿಕ್ಸ್ ನಂತರ ಸ್ಪರ್ಧಾತ್ಮಕ ಈಜಿನಿಂದ ಹಿಂದೆ ಸರಿದರೂ ಅಭ್ಯಾಸವನ್ನು ಇಂದಿಗೂ ನಿಲ್ಲಿಸಿಲ್ಲ. ಕೊರೋನಾ ಸಂಕಷ್ಟದಲ್ಲಿ ಈಜುಕೊಳಗಳು ಮುಚ್ಚಿರುವಾಗ ಮಾತ್ರ ಅವರು ಈಜುಕೊಳದಿಂದ ದೂರವಿದ್ದರು.
ರಷ್ಯಾದಲ್ಲಿ ಅಧ್ಯಯನ:
ಈಜುಕೊಳದಲ್ಲಿ ತಾನು ಮಾಡಿದ ಸಾಧನೆಯನ್ನೇ ಮುಂದಿಟ್ಟುಕೊಂಡು ಗಗನ್ ಸಹಾಯಕ ಕೋಚ್ (ಒಲಿಂಪಿಯನ್) ಹುದ್ದೆಗೆ ಅರ್ಜಿ ಹಾಕಿರಲಿಲ್ಲ. ಬದಲಾಗಿ ಒಬ್ಬ ಗುರು ಎನಿಸಿಕೊಳ್ಳಲು ಈಜಿನಲ್ಲಿ ಯಾವೆಲ್ಲ ರೀತಿಯಲ್ಲಿ ಶೈಕ್ಷಣಿಕವಾದ ತರಬೇತಿಯ ಅಗತ್ಯ ಇದೆಯೊ ಅವೆಲ್ಲವನ್ನೂ ಭಾರತ ಮತ್ತು ಅಂತಾರಾಷ್ಟ್ರೀಯ ವಿವಿ ಗಳಿಂದ ಪಡೆದಿದ್ದಾರೆ. ಅವುಗಳಲ್ಲಿ ಪ್ರಧಾನ ಎನಿಸಿರುವುದು ರಷ್ಯಾದ ಅಂತಾರಾಷ್ಟ್ರೀಯ ಒಲಿಂಪಿಕ್ ವಿಶ್ವವಿದ್ಯಾನಿಲಯದಿಂದ ಪಡೆದ ಕ್ರೀಡಾ ಆಡಳಿತದಲ್ಲಿ ಮಾಸ್ಟರ್ಸ್ ಡಿಗ್ರಿ. ಭಾರತ ಕ್ರಿಕೆಟ್ ತಂದಡ ಮಾಜಿ ಆಟಗಾರ ರಾಬಿನ್ ಸಿಂಗ್ ಭಾರತದಿಂದ ಈ ಪದವಿಯನ್ನು ಪಡೆದ ಮತ್ತೊಬ್ಬ ಕ್ರೀಡಾ ಸಾಧಕ. ಫ್ಲೋರಿಡಾ ವಿಶ್ವವಿದ್ಯಾನಿಯಲದಿಂದಲೂ ಸೈನ್ಸ್ ಆಫ್ ಟ್ರೈನಿಂಗ್ ಕೋರ್ಸ್ ಮಾಡಿದ್ದಾರೆ
50ಕ್ಕೂ ಹೆಚ್ಚು ಈಜುಗಾರರಿಗೆ ತರಬೇತಿ, ಹಲವಾರು ಕೋಚ್ ಗಳಿಗೆ ತರಬೇತಿ ನೀಡಿರುವ ಗಗನ್, ಈಗ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಈಜು ಪಟುಗಳಿಗೆ ತರಬೇತಿ ನೀಡಲು ಮುಂದಾಗಿದ್ದಾರೆ. ಈ ಗುರುವಿನ ಜವಾಬ್ದಾರಿಯನ್ನು ನಿಭಾಯಿಸಲು ಅವರು ಮಾಡಿರುವ ದೊಡ್ಡ ತ್ಯಾಗವೆಂದರೆ ಕೇಂದ್ರ ಸರಕಾರ ಆದಾಯ ತೆರಿಗೆ ಇಲಾಖೆಯಲ್ಲಿರುವ ಅಧಿಕಾರಿ ಹುದ್ದೆಯನ್ನು ತೊರೆಯುತ್ತಿರುವುದು.
ಈಜು ನನಗೆ ಬದುಕು ನೀಡಿದೆ:
ತಮ್ಮ ಮುಂದಿನ ನಡೆಯ ಬಗ್ಗೆ 24×7 livekannada ಜತೆ ಮಾತನಾಡಿದ ಗಗನ್, “ಈಜು ನನಗೆ ಬದುಕನ್ನೇ ನೀಡಿದೆ. ಆದರೆ ನಾನು ತಿರುಗಿ ಈ ಸಮಾಜಕ್ಕೆ ಏನು ಕೊಟ್ಟೆ ಎಂಬುದು ಮುಖ್ಯ. ಅದಕ್ಕಾಗಿ ಕೆಲಸದ ನಡುವೆ ಅಗತ್ಯವಿರುವ ಎಲ್ಲ ಶೈಕ್ಷಣಿಕ ಅರ್ಹತೆಗಳನ್ನು ಪಡೆದೆ. ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡಾಗಿನಿಂದ ಸ್ಥಳೀಯ ಕ್ಲಬ್ ಗಳಲ್ಲಿ ಯುವ ಈಜುಗಾರರಿಗೆ ತರಬೇತಿ ನೀಡಿದೆ. ಅವರ ಸಾಧನೆ ನನ್ನಲ್ಲಿ ಖುಷಿಯನ್ನುಂಟುಮಾಡುತ್ತಿತ್ತು. ವಿದ್ಯೆ ಇನ್ನೊಬ್ಬರಲ್ಲಿ ಹಂಚಿಕೆಯಾದರೆ ಕಲಿತ ವಿದ್ಯೆಗೊಂದು ಅರ್ಥ. ಬದುಕಲ್ಲಿ ಸಾರ್ಥಕತೆ, ಇಲ್ಲವಾದಲ್ಲಿ ಅದೊಂದು ಅಕಾಡೆಮಿಕ್ ದಾಖಲೆಯಾಗಿ ಉಳಿಯುತ್ತದೆ. ಕೆರೆಯ ನೀರನು ಕೆರೆಗೆ ಚೆಲ್ಲುವಂತೆ ನನ್ನ ಅನುಭವವನ್ನು ಇತರೊಂದಿಗೆ ಹಂಚಿಕೊಳ್ಳಲು ಉತ್ತಮ ಅವಕಾಶ. ಈ ಕಾರಣಕ್ಕಾಗಿ ಆದಾಯ ತೆರಿಗೆಯಲ್ಲಿರುವ ಅಧಿಕಾರಿ ಹುದ್ದೆಯನ್ನು ತೊರೆದು ಕ್ರೀಡಾ ಪ್ರಾಧಿಕಾರದ ಕಡೆಗೆ ಮುಖ ಮಾಡಿರುವೆ, ಇದಕ್ಕೆ ನನ್ನ ಹೆತ್ತವರು ಮುಕ್ತ ಮನಸ್ಸಿನಿಂದ ಒಪ್ಪಿ ಹಾರೈಸಿದ್ದಾರೆ,” ಎಂದು ಹೇಳಿದರು.

ಗಗನ್ ಯಾಕೆ ಚಿನ್ನದ ಮೀನು?
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೂರಾರು ಪದಕಗಳಿಗೆ ಕೊರಳೊಡ್ಡಿದ ಗಗನ್, 2011ರಲ್ಲಿ ಶಾಂಘೈಯಲ್ಲಿ ನಡೆದ ವಿಶ್ವ ಈಜುಚಾಂಪಿಯನ್ಷಿಪ್ ನ 800 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಬರೆದರು. ಕಾಮನ್ವೆಲ್ತ್ ಯೂತ್ ಗೇಮ್ಸ್, ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2009ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್ ಏಜ್ ಗ್ರೂಪ್ ಈಜಿನಲ್ಲಿ ಎರಡು ಚಿನ್ನ ಹಾಗೂ ಒಂದು ಕಂಚಿನ ಸಾಧನೆ. ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಏಜ್ ಗ್ರೂಪ್ ಚಾಂಪಿಯನ್ಷಿಪ್ ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿಯ ಸಾಧನೆ, ಬಾಂಗ್ಲಾದೇಶದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ, 2008 ರಿಂದ 2012ರವರೆಗೆ ರಾಷ್ಟ್ರೀಯ ಚಾಂಪಿಯನ್, ಒಟ್ಟು 12 ಅಂತಾರಾಷ್ಟ್ರೀಯ ಪದಕ, 80 ರಾಷ್ಟ್ರೀಯ ಪದಕಗಳು, ಏಕಲವ್ಯ ಪ್ರಶಸ್ತಿ ವಿಜೇತ, ಹೆಸರಿನ ಮುಂದೆ OLY ಎಂದು ಗೌರವದಿಂದ ಹಾಕಿಕೊಳ್ಳಲು ವಿಶ್ವ ಒಲಿಂಪಿಯನ್ಸ್ ಸಂಘಟನೆಯಿಂದ ಅನುಮತಿ..ಹೇಳಿ ಗಗನ್ ಚಿನ್ನದ ಮೀನಲ್ಲವೇ?



