ಅಂಬರೀಷ್ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ರಾಕ್ಲೈನ್ ಕಿಡಿ; ಎಚ್ಡಿಕೆಗೆ ಎಚ್ಚರಿಕೆ

ಬೆಂಗಳೂರು: ಸಂಸದೆ ಸುಮಲತಾ ಮತ್ತು ಎಚ್ಡಿ ಕುಮಾರಸ್ವಾಮಿ ಮಧ್ಯೆ ನಡೆಯುತ್ತಿರುವ ಮಾತಿನ ಕದನದ ಮಧ್ಯೆ ಈಗ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಎಂಟ್ರಿಯಾಗಿದೆ. ಕುಮಾರಸ್ವಾಮಿ ತಮ್ಮ ಮಾತುಗಳಲ್ಲಿ ಅಂಬರೀಷ್ ಹೆಸರೆತ್ತಿದ್ದಕ್ಕೆ ಅವರು ಆಕ್ರೋಶಗೊಂಡಿದ್ದಾರೆ. ಅಂಬರೀಷ್ ಸಾವಿನ ಸಂದರ್ಭದ ಮಾತು ಮತ್ತು ಅಕ್ರಮ ಗಣಿಗಾರಿಕೆಗೆ ಅಂಬರೀಷ್ ಕೂಡ ಕಾರಣ ಎಂಬ ಆರೋಪಗಳಿಗೆ ರಾಕ್ಲೈನ್ ವೆಂಕಟೇಶ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಒಂದು ಕಡೆ ಪ್ರಾನ ಸ್ನೇಹಿತ ಎನ್ನುತ್ತೀರಿ, ಇನ್ನೊಂದು ಕಡೆ ಅಕ್ರಮ ಗಣಿಗಾರಿಕೆ ಅಂಬರೀಷ್ ಕಾಲದಲ್ಲಿ ಹೆಚ್ಚಾಯಿತು ಎಂದೂ ಹೇಳಿಸುತ್ತೀರಿ. ಅಂಬರೀಷ್ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿರಲಿ ಎಂದು ರಾಕ್ಲೈನ್ ಪ್ರೆತಿಕ್ರಿಯಿಸಿದ್ದಾರೆ.
ಅಂಬರೀಷ್ ಸಾವಿನ ಸಂದರ್ಭದಲ್ಲಿ ಮಂಡ್ಯಕ್ಕೆ ಅವರ ಪಾರ್ಥಿವ ಶರೀರ ಕೊಂಡೊಯ್ಯಲು ನಾನೆಷ್ಟು ಕಷ್ಟಪಟ್ಟೆ ಎಂಬುದು ನನಗೆ ಗೊತ್ತು, ಮಂಡ್ಯಕ್ಕೆ ಕೊಂಡೊಯ್ಯುವುದು ಬೇಡ ಎಂದು ಸುಮಲತಾ ಹಠ ಮಾಡಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಕ್ಕೆ ಕೂಡ ರಾಕ್ಲೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯಕ್ಕೆ ಕೊಂಡೊಯ್ಯಬೇಕು ಎಂದಿದ್ದು ಅಂಬರೀಷ್ ಪುತ್ರ ಅಭಿಷೇಕ್. ಆದರೆ ಕುಮಾರಸ್ವಾಮಿ ಇದನ್ನೆಲ್ಲ ಈಗೇಕೆ ಪ್ರಸ್ತಾಪಿಸುತ್ತಿದ್ದಾರೆ? ಸಾವಿನ ರಾಜಕಾರಣ ಏಕೆ ಎಂದು ರಾಕ್ಲೈನ್ ಪ್ರಶ್ನಿಸಿದ್ದಾರೆ.
ಅಂಬರೀಷ್ ಅಂಥ ವ್ಯಕ್ತಿ ಬಗ್ಗೆ ಮಾತನಾಡಲು ನಮಗೆ ಯೋಗ್ಯತೆಯಿಲ್ಲ. ಅಂಥವರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ರಾಕ್ಲೈನ್ ಎಚ್ಚರಿಸಿದ್ದಾರೆ.
ಆಡಿಯೊ ವಿಡಿಯೊ ಬಾಂಬ್ ಎಂದು ಹೆದರಿಸುವುದು ಕುಮಾರಸ್ವಾಮಿಗೆ ಹೊಸದಲ್ಲ. ನಮ್ಮ ಹತ್ತಿರವೂ ಆಡಿಯೋ ವಿಡಿಯೋ ಇವೆ. ಅವರು ಹೇಳುತ್ತಿರುವಾಗ ಹಾಗೆಯೇ ಸಂದರ್ಭ ಬಂದಾಗ ನಾವೂ ಬಿಡುಗಡೆ ಮಾಡಲು ರೆಡಿ ಎಂದೂ ರಾಕ್ಲೈನ್ ಹೇಳಿದ್ದಾರೆ. ಸುಮಲತಾ ಅವರ ಚಾರಿತ್ರ್ಯವಧೆ ಮಾಡಲು ಈ ಹಿಂದೆಯೂ ಅವರು ಪ್ರಯತ್ನ ಮಾಡಿದ್ದರು ಎಂಬುದು ನಮಗೆ ಗೊತ್ತಿದೆ. ಇಂಥದ್ದನ್ನೆಲ್ಲ ಮಾಡಲು ಹೊರಟರೆ ಪರಿಣಾಮ ಅನುಭವಿಸಬೇಕಾದೀತು, ನೆನಪಿರಲಿ ಎಂದೂ ರಾಕ್ಲೈನ್ ಎಚ್ಚರಿಸಿದ್ದಾರೆ.
