ಮೇಕೆದಾಟು ವಿಚಾರ; ಸರ್ಕಾರದ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ

ರಾಮನಗರ: ಕೇಂದ್ರ – ರಾಜ್ಯ ವಿರುದ್ಧ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಸುರೇಶ್ ಮೇಕೆದಾಟು ಯೋಜನೆ ವಿಚಾರವಾಗಿ ಕೆಂಡ ಕಾರಿದ್ದಾರೆ.
ರಾಜ್ಯದ ಯಾವ ಸಂಸದರಿಗೂ, ಸಚಿವರಿಗೂ ಪ್ರಧಾನಿ ಮೋದಿ ಎದುರು ಯೋಜನೆ ಬಗ್ಗೆ ಪ್ರಸ್ತಾಪ ಮಾಡುವ ಶಕ್ತಿಯಿಲ್ಲ. ನಿಷ್ಕ್ರಿಯರಾಗಿದ್ದಾರೆ. ಸುಪ್ರೀಂಕೋರ್ಟ್ ಹಾಗೂ ಹಸಿರು ಪೀಠ ಈಗಾಗಲೇ ಯೋಜನೆಗೆ ಅಸ್ತು ಎಂದಿದೆ. ಆದರೆ ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಬೇಕಿದೆ, ಆದರೆ ರಾಜಕೀಯ ಕಾರಣದಿಂದ ಈ ಯೋಜನೆ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.
ಇನ್ನು ತಮಿಳುನಾಡು ಸಿಎಂ ಸ್ಟಾಲಿನ್ ಈ ಬಗ್ಗೆ ವಿರೋಧ ಮಾಡಿದ್ರೆ ಅದು ಗೊತ್ತಿಲ್ಲ. ರಾಜ್ಯದ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರದ ನಾಯಕರು ಈ ಬಗ್ಗೆ ಮಾತನಾಡಲಿ. ಎರಡೂ ಕಡೆ ನಮ್ಮ ಸರ್ಕಾರ ಇದ್ದರೆ ಕೆಲಸ ಮಾಡಲು ಅನುಕೂಲ ಎನ್ನುತ್ತಿದ್ದರು. ಈಗ ಎರಡೂ ಕಡೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಈ ಯೋಜನೆ ಮಾಡಲಿ ಎಂದು ತಿಳಿಸಿದರು.
ಇನ್ನು ಈ ಹಿಂದೆಯೇ ಯೋಜನೆಯ ಡಿಪಿಆರ್ ಸಿದ್ಧವಾಗಿದೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆದರೆ ಈವರೆಗೆ ಮೇಕೆದಾಟು ವಿಚಾರವಾಗಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಈಗಲಾದರೂ ಮೇಕೆದಾಟು ಯೋಜನೆಯನ್ನ ಜಾರಿ ಮಾಡಲಿ ಎಂದು ಸಂಸದ ಡಿ.ಕೆ.ಸುರೇಶ್ ಕೇಂದ್ರ, ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.




