ಬಲೂನ್ ಮಾರುವ ಸೋಗಿನಲ್ಲಿ ಬಂದು ಮನೆಗೆ ಕನ್ನ ಹಾಕ್ತಿದ್ದ ಖತರ್ನಾಕ್ ಪಾರ್ದಿ ಗ್ಯಾಂಗ್ ಬಂಧನ

ಕಲಬುರಗಿ: ಹಗಲು ಬಲೂನ್ ಮಾರುವ ಸೋಗಿನಲ್ಲಿ ಬಂದು ಬೀಗ ಹಾಕಿದ ಮನೆ ಗುರುತಿಸಿ ರಾತ್ರಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಪಾರ್ದಿ ಗ್ಯಾಂಗ್ನ ಓರ್ವ ವೃದ್ಧೆ ಸೇರಿ ಏಳು ಜನ ಮನೆಗಳ್ಳರನ್ನು ಕಲಬುರಗಿ ಚೌಕ್ ಠಾಣೆ ಪೊಲೀಸರು ಹೆಡೆಮೂರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ರಘು ಅಲಿಯಾಸ್ ರಘಲ್ಯಾ ಚೌವ್ಹಾಣ (19), ಶಿವ್ಯಾ ಅಲಿಯಾಸ್ ಶಿಲವಂತ ಕಾಳೆ (19), ರತ್ನ್ಯಾ ಅಲಿಯಾಸ್ ರತ್ನು ಪವಾರ್ (21), ಲಾಲು ಕಾಳೆ (24), ಗಣೇಶ್ ಕಾಳೆ (19), ಶ್ರಾವಣ ಶಿಕಾರಿ (24), ಕಲಾವತಿ ಗೌನ್ಯ (60) ಬಂಧಿತ ಆರೋಪಿಗಳು. ಬಂಧಿತರಿಂದ 8 ಲಕ್ಷ ಮೌಲ್ಯದ 163 ಗ್ರಾಮ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಹಾಗೂ ಎರಡು ನಾಲ್ಕು ಚಕ್ರದ ವಾಹನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವೃದ್ಧೆ ಬಲೂನ್ ಮಾರುವ ಸೋಗಿನಲ್ಲಿ ಬಂದು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಗ್ಯಾಂಗ್ ನ ಇತರೆ ಸದಸ್ಯರಿಗೆ ತಿಳಿಸುತ್ತಿದ್ದಳು. ಆಗ ಆಕೆ ಜೊತೆ ಇರುವ ಇತರರು ರಾತ್ರಿ ವೇಳೆ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಹಣ ಹಾಗೂ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.
ಕಲಬುರಗಿಯ ಸುವರ್ಣ ನಗರ, ಜಿಡಿಎ ಕಾಲೋನಿ ಸೇರಿದಂತೆ ಹಲವೆಡೆ ಕಳ್ಳತನ ಮಾಡಿ ತೆಲೆ ಮರೆಸಿಕೊಂಡು ತಿರುಗಿತ್ತಿದ್ದರು. ಚಾಲಾಕಿ ಕಳ್ಳರ ಗ್ಯಾಂಗ್ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿದ ಪೊಲೀಸರು ಕೊನೆಗೂ ಐನಾತಿ ಕಳ್ಳರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.




