ಚಿಕ್ಕಮಗಳೂರುಜಿಲ್ಲಾ ಸುದ್ದಿ

ಕಾಫಿ ನಾಡಿನಲ್ಲಿ ಪ್ರವಾಸಿಗರ ದಂಡು: ಕೋವಿಡ್ ನಿಂದ ಸೊರಗಿದ್ದ ಪ್ರವಾಸೋದ್ಯಮ  ಚೇತರಿಕೆ

ಚಿಕ್ಕಮಗಳೂರು: ಕೋವಿಡ್ ಪರಿಣಾಮ ಕಳೆದೆರಡು ವರ್ಷಗಳ ಹಿಂದಿನಿಂದ ಸೊರಗಿ ಹೋಗಿದ್ದ ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಕೆಲ ದಿನಗಳಿಂದ ಚೇತರಿಕೆ ಕಾಣಿಸಿಕೊಂಡಿದೆ. ಪ್ರವಾಸಿಗರನ್ನು ಸೆಳೆಯಲು ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿರುವುದು ಒಂದೆಡೆಯಾದರೆ, ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಪ್ರಾಕೃತಿಕ ಸೌಂದರ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಗಿರಿಶ್ರೇಣಿಗಳಾದ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಧಾರ, ಚಾರ್ಮಾಡಿ ಘಾಟ್, ದೇವರಮನೆ ಹಾಗೂ ಯಾತ್ರಾಸ್ಥಳಗಳಾದ  ಶೃಂಗೇರಿ, ಹೊರನಾಡು, ಕಳಸ, ಜಲಪಾತಗಳಾದ ಕಲ್ಲತ್ತಗಿರಿ, ಹೆಬ್ಬೆ, ಶಂಕರಪಾಲ್ಸ್, ಸಿರಿಮನೆ ಪ್ರವಾಸಿಗರ ಆಕರ್ಷಣೀಯ ಸ್ಥಳಗಳಾಗಿವೆ.

ಫೆಬ್ರವರಿಯಲ್ಲಿ ಒಟ್ಟು ೩,೩೭,೮೯೩ ಪ್ರವಾಸಿಗರ ಭೇಟಿ ನೀಡಿ ವಿವಿಧ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿದ್ದಾರೆ. ಶೃಂಗೇರಿಗೆ ೧.೩೭ ಲಕ್ಷ, ಹೊರನಾಡಿಗೆ ೧.೨೦ ಲಕ್ಷ, ಕಳಸಕ್ಕೆ ೩೫ ಸಾವಿರ, ದತ್ತಪೀಠಕ್ಕೆ ೨೭ ಸಾವಿರ, ಕೆಮ್ಮಣ್ಣುಗುಂಡಿಗೆ ೧೮ ಸಾವಿರ ಮಂದಿ ಭೇಟಿ ನೀಡಿದ್ದಾರೆ.

ಮಾರ್ಚ್ನಲ್ಲಿ ಒಟ್ಟು ೩,೧೦,೮೪೦ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ ಶೃಂಗೇರಿಗೆ ೧.೩೮ ಲಕ್ಷ, ಹೊರನಾಡಿಗೆ ೧.೧೭ ಲಕ್ಷ, ಕಳಸಕ್ಕೆ ೧೧ ಸಾವಿರ, ದತ್ತಪೀಠಕ್ಕೆ ೨೮ ಸಾವಿರ, ಕೆಮಮಣ್ಣುಗುಂಡಿಗೆ ೧೬ ಸಾವಿರ ಮಂದಿ ಭೇಟಿ ನೀಡಿದ್ದಾರೆ.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ೨೦೦ ಕೋಟಿ ರೂ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಅದರ ಅರ್ಧದಷ್ಟು ಹಣ ಬಿಡುಗಡೆಯಾಗಿದೆ. ಕೋಟೆಕೆರೆ ಅಭಿವೃದ್ಧಿಗೆ ೪೪ ಲಕ್ಷ ರೂ. ಮೀಸಲಿಟ್ಟಿದ್ದು, ಆ ಹಣವನ್ನು ವಿವಿಧ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಅಧಿಕೃತ ಹೋಂ ಸ್ಟೇಗಳಿಗೆ ಅವಕಾಶ: ನಿಯಮ ಉಲ್ಲಂಘಿಸಿದ ಜಿಲ್ಲೆಯ ೬ ಹೋಂ ಸ್ಟೇಗಳ ಬಾಗಿಲು ಮುಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೪೮೬ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ ೩೦೦, ನಗರ ೧, ತರೀಕೆರೆ ೬, ಮೂಡಿಗೆರೆ ೧೪೮, ಶೃಂಗೇರಿ ೯, ನರಸಿಂಹರಾಜಪುರ ೧, ಕೊಪ್ಪ ೨೧ ಹೋಂಸ್ಟೇಗಳಿವೆ. ಅನಧಿಕೃತ ಹೋಂ ಸ್ಟೇಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button