
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ ವೇಳೆ ಗಲಾಟೆ ನಡೆದಿದ್ದು, ಭಾರೀ ಗದ್ದಲದ ನಡುವೆಯೇ ಅಂತ್ಯಕ್ರಿಯೆ ನೆರವೇರಿದೆ. ಶವಸಂಸ್ಕಾರದ ಹಂತದಲ್ಲಿಯೂ ಹೈಡ್ರಾಮಾ ನಡೆದಿದ್ದು, ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬರಬೇಕು. ಸಂತೋಷ್ ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡುವ ಖಾತ್ರಿ ಕೊಡಬೇಕು. ಮೃತನ ಪತ್ನಿಗೆ ಸರ್ಕಾರಿ ಕೆಲಸ ಘೋಷಿಸಬೇಕು.
ಅಲ್ಲಿಯವರೆಗೂ ಸಮಾಧಿಗೆ ಮಣ್ಣು ಹಾಕಲು ಅವಕಾಶ ಕೊಡುವುದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಅಡಿವೇಶ ಇಟಗಿ ಪಟ್ಟು ಹಿಡಿದಿದ್ದರು. ಇದಕ್ಕೆ ಆಕ್ಷೇಪಿಸಿದ ಮಾವ ಸಂತೋಷ್ ಸಾವಿನ ಮನೆಯಲ್ಲಿ ರಾಜಕೀಯ ಮಾಡಬೇಡಿ. ಸಂತೋಷ್ ಚಿಕ್ಕವನಿರುವಾಗ ನಾವು ಬೆಳೆಸಿದ್ದೇವೆ. ಮೊದಲು ಅಂತ್ಯಕ್ರಿಯೆ ಮಾಡೋಣ. ನಂತರ ಹೋರಾಟ ಮಾಡೋಣ ಎಂದರು.
ಒತ್ತಾಯ ಪೂರ್ವಕವಾಗಿ ಜೆಸಿಬಿಯಿಂದ ಮಣ್ಣು ಹಾಕಲು ಯತ್ನಿಸಿದಾಗ ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ಅಡ್ಡಿಪಡಿಸಲು ಮುಂದಾದರು. ಅಡಿವೇಶ ಇಟಗಿ ಅವರನ್ನು ಸ್ಥಳೀಯರು ಒತ್ತಾಯ ಪೂರ್ವಕವಾಗಿ ಆ ಕಡೆ ಎಳೆದೊಯ್ದರು. ಕೊನೆಗೂ ಜೆಸಿಬಿ ಮುಖಾಂತರ ಪಾರ್ಥೀವ ಶರೀರದ ಮೇಲೆ ಮಣ್ಣು ಹಾಕಿ ಅಂತ್ಯಕ್ರಿಯೆ ಮಾಡಲಾಯಿತು.



