ಕಾಂಗ್ರೆಸ್ ವಿರೋಧದ ನಡುವೆಯು ಸಂತೋಷ್ ಪಾಟೀಲ್ ಅಂತ್ಯಕ್ರಿಯೆ

ಬೆಳಗಾವಿ: ಸಚಿವ ಕೆ.ಎಸ್.ಈಶ್ವರಪ್ಪ ಹೆಸರು ಬರೆದಿಟ್ಟು ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿ ನೆರವೇರಿತು.
ಕಾಂಗ್ರೆಸ್ ನಾಯಕರ ತೀವ್ರ ವಿರೋಧದ ನಡುವೆಯೂ ಸಂತೋಷ್ ಪಾಟೀಲ್ ಅಂತ್ಯಕ್ರಿಯೆಯನ್ನ ಲಿಂಗಾಯತ ವಿಧಿ ವಿಧಾನದ ಪ್ರಕಾರ ನೆರವೇರಿಸಲಾಯಿತು. ಸಂತೋಷ್ ಪಾಟೀಲ್ ಅವರ ಜಮೀನಿನಲ್ಲಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದು ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಆಪ್ತ ಅಡಿವೇಶ ಇಟಗಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು. ಪರಿಹಾರ ಘೋಷಣೆ ಮಾಡಬೇಕು ಹಾಗೂ ಬಾಕಿ ಬಿಲ್ ಮಂಜೂರಾತಿ ಮಾಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲೇ ಇರುವ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಲ್ಲವೇ ಬಿಜೆಪಿ ಮುಖಂಡರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
