
ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ಸಚಿವ ಸಂಪುಟ ಪುನರ್ ರಚನೆ ವಿಸ್ತರಣೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ನಗರಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಆದರೆ, ನಾನು ವೈಎಸ್ಸಾರ್ ಪಕ್ಷದ ‘ಲಕ್ಕಿ ಚಾರ್ಮ್’ ಎಂದು ಹೇಳಿಕೊಳ್ಳುತ್ತಿದ್ದ ರೋಜಾ ಸೆಲ್ವಮಣಿ ಇಂದು ಸಕತ್ ಭಾವನಾತ್ಮಕವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದಲ್ಲದೆ ಸಿಎಂ ಜಗನ್ ಅವರಿಗೆ ಮುತ್ತು ನೀಡಿ, ಧನ್ಯವಾದ ಅರ್ಪಿಸಿದ್ದಾರೆ.
ಪೂರ್ವ ನಿಯೋಜಿತ ಮುಹೂರ್ತದ ಪ್ರಕಾರ ಸರಿಯಾಗಿ 11.31ಕ್ಕೆ ಸಚಿವರ ಪ್ರಮಾಣ ವಚನ ಆರಂಭವಾಯಿತು. ಸಚಿವರ ಪ್ರಮಾಣ ವಚನ ಅಕಾರಾದಿಯಲ್ಲಿ ಮುಂದುವರಿಯಿತು. ಅಂಬಟಿ ರಾಂಬಾಬು ಅವರು ಮೊದಲು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ತಮ್ಮಿನೇನಿ ಕೂಡ ಗೈರು ಹಾಜರಾಗಿದ್ದರು. ಸಚಿವ ಸ್ಥಾನ ಸಿಗಲಿಲ್ಲ ಎಂದು ಸಿಟ್ಟಿಗೆದ್ದ ಸುಚರಿತಾ, ಬಾಲಿನೇನಿ ಗೈರು ಹಾಜರಾಗಿದ್ದರು.
ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ರೋಜಾ ಭಾವುಕರಾಗಿದ್ದರು. ಆರ್ ಕೆ ರೋಜಾ ಎಂಬ ಹೆಸರಿನ ನಾನು ಎಂದು ತೆಲುಗು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಕಣ್ಣೀರನ್ನು ಕಂಟ್ರೋಲ್ ಮಾಡುತ್ತಾ ಜಗನ್ ಬಳಿ ತೆರಳಿ ಕಾಲಿಗೆರಗಿ, ಜಗನ್ ಕೈ ಹಿಡಿದು ಪ್ರೀತಿಯಿಂದ ಮುತ್ತಿಕ್ಕಿ, ಸಚಿವ ಸ್ಥಾನ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.



