Latestಕೃಷಿವಿಶೇಷ

ಪಾಲಿಹೌಸ್​​ನಲ್ಲಿ ತರಕಾರಿ: ಸೀಸನ್ ಯಾವುದೇ ಇರಲಿ ನಿಮಗೆ ಬೇಕಾದ ತರಕಾರಿ ಬೆಳೆಯಿರಿ

ಈ ಗ್ರೀನ್​ಹೌಸ್​ಗಳಲ್ಲಿ ತರಕಾರಿ ಬೆಳೀಬಹುದಾ..? ಒಂದೊಂದು ಸೀಸನ್​ನಲ್ಲಿ ಒಂದೊಂದು ತರಕಾರಿ. ಇದು ನಮ್ಮ ಬಹುತೇಕ ರೈತರಿಗೆ ಗೊತ್ತಿರೋ ವ್ಯವಸಾಯ. ಆದ್ರೀಗ ಪಾಲಿಹೌಸ್​ಗಳು ಜನಪ್ರಿಯವಾಗ್ತಿವೆ. ಯಾವ ಸೀಸನ್​ನಲ್ಲಿ ಬೇಕಾದ್ರೂ ನಮಗೆ ಬೇಕಾದ ತರಕಾರಿ ಬೆಳೆಯಬಹುದಾದ ಲಾಭದಾಯಕ ವಿಧಾನ ಇದು.

ಈಗ ನಾವು ಒಂದೊಂದು ತರಕಾರಿ ಅಂದ್ರೆ ಒಂದೊಂದು ಸೀಸನ್​ನಲ್ಲಿ ಬೆಳೆಯೋದು ಅಂತಾ ತಿಳ್ಕೊಂಡಿದ್ದೇವೆ. ಆದ್ರೆ, ಗ್ರೀನ್​ಹೌಸ್​ಗಳಿಂದಾಗಿ ಇವತ್ತು ಯಾವ ತರಕಾರಿಯನ್ನು ಯಾವಾಗ ಬೇಕಾದ್ರೂ ಬೆಳೀಬಹುದು. ಗ್ರೀನ್​ಹೌಸ್​ಗಳು ವ್ಯವಸಾಯ ರಂಗದಲ್ಲಿ ಕ್ರಾಂತಿಕಾರಕವಾದ ಬದಲಾವಣೆಗಳಿಗೆ ಕಾರಣವಾಗಿದೆ.

ಸಸ್ಯಗಳ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿಕೊಟ್ಟು, ಹೊರ ವಾತಾವರಣದಿಂದ ಬರಬಹುದಾದ ಯಾವುದೇ ಕೀಟಾಣು, ರೋಗಾಣು ನುಸುಳದಂತೆ ವ್ಯವಸ್ಥೆ ಕಲ್ಪಿಸಿ ಬೆಳೆ ಬೆಳೆಸೋ ಇಂಥ ಪದ್ದತಿಯನ್ನ ಸಂರಕ್ಷಿತ ಬೇಸಾಯ ಅಂತಾರೆ. ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ, ಇದೇ ಗ್ರೀನ್ ಹೌಸ್ ಅಥವಾ ಪಾಲೀಹೌಸ್ ಬೇಸಾಯ. ಇದ್ರಲ್ಲಿ ಕ್ಯಾಪ್ಸಿಕಂ ಬೆಳೆಯೋ ಪದ್ಧತಿ ಇತ್ತೀಚೆಗೆ ಸಖತ್ ಪಾಪುಲರ್ ಆಗ್ತಿದೆ. ಇದು ಬೆಳೆಯೋ ರೀತಿ ಕೂಡ ಸಿಂಪಲ್ ಆಗಿದೆ.

ಮೊದ್ಲು ಏರು ಮಡಿಯಲ್ಲಿ ಉತ್ತಮ ಜಾತಿಯ ಬೀಜಗಳನ್ನು ಹಾಕಿ ಬಿತ್ತನೆ ಮಾಡ್ಬೇಕು. ಇಂತಾ ಮಡಿಗಳಲ್ಲಿ ತೆಂಗಿನ ನಾರು, ಉಸುಕು, ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಬೆರೆಸಿ ಸಸಿಗಳನ್ನು ತಯಾರಿಸಬೇಕು. 30 ದಿವಸ ಬೆಳೆದ ಸಸಿಗಳನ್ನು 12/12 ಇಂಚಿನ ಪಾಲಿ ಬ್ಯಾಗ್‌ಗಳಲ್ಲಿ ನಾಟಿ ಮಾಡ್ಬೇಕು. ಇದಾದ 30 ದಿನಗಳ ನಂತರ ಹೂವು ಬಿಡಲು ಪ್ರಾರಂಭಿಸುತ್ತದೆ. 20 ದಿನಗಳ ನಂತರ ಮೊದಲ ಫಸಲು ಸಿಗುತ್ತೆ. ಅಂದ್ರೆ 70 ರಿಂದ 80 ದಿನಗಳ ನಂತರ ಪ್ರತಿ ಗಿಡದಿಂದ 4 ರಿಂದ 5 ಕೆ.ಜಿ ಕ್ಯಾಪ್ಸಿಕಂ ಇಳುವರಿ ಪಡೆಯಬಹುದು.

ಪಾಲಿ ಹೌಸ್‌ನಲ್ಲಿ ಬೆಳೆಯನ್ನು ಬೆಳೆಯೋದ್ರಿಂದ ಮಳೆಯಿಂದ, ಗಾಳಿಯಿಂದ, ಪ್ರಖರವಾದ ಸೂರ್ಯನ ಶಾಖದಿಂದ, ಅತೀ ಚಳಿಯಿಂದ, ಪ್ರಾಣಿಗಳಿಂದ, ಕಳ್ಳಕಾಕರಿಂದ, ಕೀಟಗಳಿಂದ ಬೆಳೆಯನ್ನು ಸಂರಕ್ಷಿಸಬಹುದು. ವರ್ಷದ ಎಲ್ಲಾ ಕಾಲದಲ್ಲಿಯೂ ಗುಣಮಟ್ಟದ ಬೆಳೆಯನ್ನು ಬೆಳೀಬಹುದು. ಜೊತೆಗೆ ರೋಗ ನಿಯಂತ್ರಣ, ಕೀಟಗಳ ನಿಯಂತ್ರಣ, ಕಳೆ ನಿಯಂತ್ರಣ ಸುಲಭ. ಪಾಲಿಹೌಸ್ ನಿರ್ಮಾಣಕ್ಕೆ ಸರ್ಕಾರ ಶೇ 25ರಿಂದ ಶೇ 50ರವರೆಗೆ ಸಬ್ಸಿಡಿ ನೀಡುತ್ತೆ.

ಈ ವ್ಯವಸ್ಥೆಯಲ್ಲಿ ನೀರು, ಗೊಬ್ಬರ ಹಾಗೂ ಕೂಲಿಕಾರರ ಬಳಕೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ. ವಿಶೇಷ ಏನ್ ಗೊತ್ತಾ..? ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲೂ ಪಾಲಿಹೌಸ್‌ಗಳನ್ನು ನಿರ್ಮಿಸಬಹುದು. ಸಾವಯವ ಕೃಷಿಗಂತೂ ಇದು ಹೇಳಿ ಮಾಡಿಸಿದ ಪದ್ಧತಿ. ಈ ವ್ಯವಸ್ಥೆಯಲ್ಲಿ 8ರಿಂದ 10 ಪಟ್ಟು ಹೆಚ್ಚುವರಿ ಇಳುವರಿಯನ್ನು ಪಡೆಯಲು ಸಾಧ್ಯ. ಇದು ಕಡಿಮೆ ಹಿಡುವಳಿ ಹೊಂದಿರೋ ಸಣ್ಣ ಮತ್ತು ಅತೀ ಸಣ್ಣ ರೈತರ ಭಾಗ್ಯದ ಬಾಗಿಲನ್ನು ತೆರೆಯೋದಂತೂ ಖಂಡಿತ ಅಂತಾರೆ ಕೃಷಿ ತಜ್ಞರು.


-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, 24×7 ಲೈವ್ ಕನ್ನಡ

Spread the love

Related Articles

Leave a Reply

Your email address will not be published. Required fields are marked *

Back to top button