ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಎಂದ ಶಿವಣ್ಣ

ಡಾ.ರಾಜ್ ಕುಮಾರ್ ಕುಟುಂಬದ ಕನಸಿನ ಕೂಸು ಮೈಸೂರಿನ ಶಕ್ತಿಧಾಮದ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ಕಟ್ಟಡ ಲೋಕಾರ್ಪಣೆ ಹಾಗೂ ಶಕ್ತಿಧಾಮ ವಿದ್ಯಾಶಾಲಾ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್ ”ಸಿಎಂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ರೀತಿ ಎಂದು ವರ್ತಿಸಲಿಲ್ಲ. ಅವರೊಬ್ಬ ಕಾಮನ್ ಮ್ಯಾನ್. ಸಿಎಂ ಅವರು ನಮ್ಮ ಕುಟುಂಬದ ಮೇಲೆ ಅಪ್ಪು ಅವರು ಅಗಲಿದಾಗಿನಿಂದಲೂ ಇಟ್ಟಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಭಾವನೆಯನ್ನು ನಾಟಕ ಮಾಡಲು ಆಗಲ್ಲ. ಹೀಗಾಗಿ ಅವರ ಭಾವನಾತ್ಮಕತೆ ನಮಗೆ ಸ್ಪೂರ್ತಿಯಾಗಿದ್ದು, ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದರು.
ಪುನೀತ್ ರಾಜ್ಕುಮಾರ್ ನಿಧನರಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಹಳ ಭಾವುಕರಾಗಿದ್ದರು. ಅಂತಿಮ ದರ್ಶನ, ಅಂತ್ಯಕ್ರಿಯೆ ಇನ್ನಿತರೆ ಕಾರ್ಯಗಳಿಗೆ ಸರ್ಕಾರದಿಂದ ಸಕಲ ನೆರವನ್ನೂ ನೀಡಿದರು. ದೊಡ್ಮನೆ ಕುಟುಂಬದ ಸದಸ್ಯರಂತೆ ನಿಂತು ಎಲ್ಲ ಕಾರ್ಯಗಳನ್ನು ಹತ್ತಿರವಿದ್ದು ನೋಡಿಕೊಂಡಿದ್ದರು. ಅಪ್ಪು ಅಂತ್ಯಕ್ರಿಯೆಗೆ ಮುನ್ನ ಭಾವುಕರಾಗಿ ಹಣೆಗೆ ಮುತ್ತಿಟ್ಟು ಅಪ್ಪುವನ್ನು ಕಳಿಸಿಕೊಟ್ಟಿದ್ದರು ಎಂದು ಅಂದಿನ ಕ್ಷಣವನ್ನು ನೆನೆದು ಭಾವುಕರಾದರು.
ಇದೇ ವೇಳೆ ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
