BSY ಮೇಲೆ ಮತ್ತೊಂದು ಭೂಹಗರಣ ಆರೋಪ

ಮಾಜಿ ಮುಖ್ಯಮಂತ್ರಿ B.S.ಯಡಿಯೂರಪ್ಪ ವಿರುದ್ಧ ಮತ್ತೊಂದು ಭೂ ಹಗರಣ ಅರೋಪ ಕೇಳಿ ಬಂದಿದೆ. BSY ತಮ್ಮ ಅಧಿಕಾರ ಅವಧಿಯಲ್ಲಿ ನಾಗರಭಾವಿಯಲ್ಲಿರುವ ಚಾಣಕ್ಯ ವಿವಿ ಸೆಂಟರ್ ಫರ್ ಎಜುಕೇಷನ್ ಅಂಡ್ ಸೋಶಿಯಲ್ ಸ್ಟಡೀಸ್ ಸಂಸ್ಥೆಗೆ ಕಾನೂನು ಬಾಹಿರವಾಗಿ 116 ಎಕರೆ ಭೂಮಿ ಮಂಜೂರು ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.
BSY ಈ ಸಂಸ್ಥೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಿಂದ ಭೂಮಿಯನ್ನು ಮಂಜೂರು ಮಾಡಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕೋಲಾರ ಮೂಲದ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡಲು ಸರ್ಕಾರದ ಮಾರ್ಗಸೂಚಿ ದರಕ್ಕಿಂತಲೂ ಕಡಿಮೆ ದರ ನಿಗದಿ ಮಾಡಿ, ಸರ್ಕಾರದ ಬೊಕ್ಕಸಕ್ಕೆ 136. 76 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಈ ಮೂಲಕ ಖಾಸಗಿ ಸಂಸ್ಥೆಗೆ ಲಾಭ ಮಾಡಿ ಅಕ್ರಮ ಎಸಗಿದ್ದಾರೆ. ಹೀಗಾಗಿ BSY ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.
ಈ ಹಿಂದೆ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಕಿಕ್ ಬ್ಯಾಕ್ ಪಡೆದ ಆರೋಪ ಕೇಳಿ ಬಂದಾಗ BSY ಸಿಎಂ ಹುದ್ದೆಯಿಂದ ಕೆಳಗೆ ಇಳಿದಿದ್ದರು. BSY ಸಿಎಂ ಆಗಿದ್ದಾಗಲೇ ಲೋಕಾಯುಕ್ತ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ಯಡಿಯೂರಪ್ಪ ಸಿಎಂ ಆಗಿ ರಾಜ್ಯವಾಳಿದ್ದರು. ಇದೀಗ ಮತ್ತೊಂದು ಭೂ ಹಗರಣ ಬಿಎಸ್ ವೈ ಅವರನ್ನ ಸುತ್ತಿಕೊಂಡಿದೆ.
