BBMP ನೌಕರರ ಸಂಘದಿಂದ ಕನ್ನಡದ ಸಾಧಕರಿಗೆ ಪುನೀತ್ ರಾಜ್ಕುಮಾರ್ ಪ್ರಶಸ್ತಿ

ಬೆಂಗಳೂರು: ಭಾನುವಾರ ಸಂಜೆ ಬೆಂಗಳೂರಿನ ಹೃದಯಭಾಗದಲ್ಲಿರುವ ಬಿಬಿಎಂಪಿ ಕೇಂದ್ರ ಕಚೇರಿ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಕಾರ್ಯಕ್ರಮದಿಂದಾಗಿ ರಂಗುರಂಗಾಗಿತ್ತು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಾದಿಯಾಗಿ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
BBMP ನೌಕರರ ಕನ್ನಡ ಸಂಘ ಹಮ್ಮಿಕೊಂಡಿದ್ದ ಈ ಅದ್ದೂರಿ ಕಾರ್ಯಕ್ರಮ ಸಂಜೆ ಐದೂವರೆಗೆ ಪ್ರಾರಂಭವಾಯಿತು. ಆರಂಭದಲ್ಲಿ ವೇದಿಕೆಯಲ್ಲಿ ರಾಜ್ ಗಾಯನ ಸಿರಿ ನಡೆದರೆ, ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಪುತ್ಥಳಿಯನ್ನು ಲೋಕಾರ್ಪಣೆ ಮಾಡಲಾಯಿತು. ಇದನ್ನು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ದಿ.ಪುನೀತ್ ರಾಜ್ಕುಮಾರ್ ಧರ್ಮಪತ್ನಿ ಅಶ್ವಿನಿಯವರು ನೆರವೇರಿಸಿದರು.

ನಂತರ ಕಾರ್ಯಕ್ರಮದ ಮುಖ್ಯಘಟ್ಟದಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ಸಾಧಕಿಯರಿಗೆ ಡಾಕ್ಟರ್ ಪುನೀತ್ ರಾಜ್ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಹಿರಿಯ ಚಲನಚಿತ್ರ ನಟ ಶ್ರೀನಾಥ್, ಶ್ರೀ ಎಸ್.ಕೆ.ಭಗವಾನ್ (ದೊರೈ), ಶ್ರೀಮತಿ ತಾರಾ, ಪೊಲೀಸ್ ಆಯುಕ್ತರಾದ ಎಚ್.ಎಸ್.ಪರಮೇಶ್ವರ್, ಟಿವಿ9 ನಿರೂಪಕರಾದ ರಂಗನಾಥ್ ಭಾರದ್ವಾಜ್, ಸುವರ್ಣ ನ್ಯೂಸ್ ಸಂಪಾದಕರಾದ ಜಯಪ್ರಕಾಶ ಶೆಟ್ಟಿ, ಹಿರಿಯ ಕನ್ನಡ ಸಾಹಿತಿ ಮರಳುಸಿದ್ದಪ್ಪ, ಮಾಜಿ ಸಚಿವೆ ಹಾಗೂ ಸಾಹಿತಿ ಬಿ.ಟಿ.ಲಲಿತಾನಾಯಕ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಆರ್.ಪಿ.ಜಗದೀಶ್, ಪ್ರಸಿದ್ದ ಹಿನ್ನೆಲೆ ಗಾಯಕ ವಿಜಯಪ್ರಕಾಶ್, ಖ್ಯಾತ ಹಿನ್ನೆಲೆ ಗಾಯಕಿ ರಮ್ಯಾ ವಸಿಷ್ಠ, ಖ್ಯಾತ ಹಾಸ್ಯನಟ ಹೊನ್ನವಳ್ಳಿ ಕೃಷ್ಣ, ಹಾಗೂ ರಾಜ್ ಕುಟುಂಬದ ಆಪ್ತ ಚೆನ್ನ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿಯನ್ನು ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿಯವರು ಪುರಸ್ಕೃತರಿಗೆ ಪ್ರದಾನ ಮಾಡಿದರು. ನಂತರ ಬೊಮ್ಮಾಯಿಯವರು ಪುನೀತ್ ಕುರಿತು ಮಾತನಾಡಿದರು. ಪುನೀತ್ ಸಹೋದರ ರಾಘವೇಂದ್ರ ರಾಜಕುಮಾರ್ ಸಹ ಈ ಸಂದರ್ಭದಲ್ಲಿ ಪುನೀತ್ ಕುರಿತು ಮಾತನಾಡಿದರು. ಬಿ.ಟಿ.ಲಲಿತಾನಾಯಕ್ ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದರು.
ಪ್ರಶಸ್ತಿ ಪ್ರದಾನ ಸಮಯದಲ್ಲಿ ಪುರಸ್ಕೃತರ ಪಟ್ಟಿಯಲ್ಲಿದ್ದ ವಿಜಯ್ ಪ್ರಕಾಶ್ ಗೈರಾಗಿದ್ದರೆ, ಶ್ರೀನಾಥ್ ಮೊದಲು ಕಾಣಿಸಿಕೊಂಡರೂ ನಂತರ ಸನ್ಮಾನ ಸಮಯದಲ್ಲಿ ವೇದಿಕೆಯ ಮೇಲೆ ಕಂಡುಬರಲಿಲ್ಲ.




