ಕಥೆ

ಮಕ್ಕಳ ಬಗ್ಗೆ ತಾರತಮ್ಯ ಬೇಡ


ರಾಮಯ್ಯನಿಗೆ ಇಬ್ಬರು ಮಕ್ಕಳು. 10ನೇ ತರಗತಿ ಓದುತ್ತಿದ್ದರು. ಮೊದಲಿನವನು ರಮೇಶ. ಎರಡನೆಯವನು ಸತೀಶ. ರಮೇಶ ಮತ್ತು ಸತೀಶ ಇಬ್ಬರ ಪೈಕಿ ರಾಮಯ್ಯನವರಿಗೆ ರಮೇಶನ ಮೇಲೆ ಬಹಳ ಪ್ರೀತಿ. ಜೊತೆಗೆ ರಮೇಶ ಓದಿನಲ್ಲಿ ಬಹಳ ಜಾಣನೆಂಬ ಅಭಿಮಾನವಿತ್ತು.
ಆದರೆ ಸತೀಶನಿಗೆ ಅಷ್ಟೇನು ಓದಿನಲ್ಲಿ ಆಸಕ್ತಿ ಇರಲಿಲ್ಲ. ಇದ್ದರೂ ತಲೆಗೆ ವಿದ್ಯೆ ಹತ್ತುತ್ತಿರಲಿಲ್ಲ. ಹೀಗಾಗಿ ರಾಮಯ್ಯನವರು ತಮ್ಮ ಎರಡನೇ ಮಗ ಸತೀಶನನ್ನು ಪದೇ ಪದೇ ದಡ್ದ ದಡ್ಡ ಎಂದು ಬಯ್ಯುತ್ತಿದ್ದರು.

ಆದರೆ ಸತೀಶನಿಗೆ ತಂದೆಯ ಮೇಲೆ ಕೋಪವಾಗಲಿ ಬೇಸರವಾಗಲಿ ಇರಲಿಲ್ಲ. ’ತಂದೆಯವರು ನನಗೆ ಬಯ್ಯುವುದು ಸರಿಯಾಗಿಯೇ ಇದೆ. ನನ್ನ ತಲೆಗೆ ವಿದ್ಯೆ ಹತ್ತುವುದಿಲ್ಲ. ನಾನೇನು ಮಾಡಲಿ, ಎಷ್ಟು ಓದಿದರೂ ನನಗೆ ಅರ್ಥವಾಗುವುದಿಲ್ಲ ಎಂದು ತನಗೆ ತಾನೇ ಬೇಸರಗೊಳ್ಳುತ್ತಿದ್ದ. ಆದರೆ ಸತೀಶನಿಗೆ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಆಸಕ್ತಿ. ಬ್ಯಾಟ್ ಮಾಡುತ್ತಲಿದ್ದರೆ ಆತನನ್ನು ಔಟ್ ಮಾಡುವುದೇ ಕಷ್ಟವೆಂದು ಅವನ ಗೆಳೆಯರು ಮಾತನಾಡಿಕೊಳ್ಳುತ್ತಿದ್ದರು. ರಾಮಯ್ಯನವರಿಗೆ ಕ್ರೀಡೆಗಳ ಬಗ್ಗೆ ತಾತ್ಸಾರವಿತ್ತು. ಮಕ್ಕಳು ಓದಿನಲ್ಲಿ ಹೆಚ್ಚು ಅಂಕಗಳಿಸಬೇಕು.

ಮೂರೊತ್ತು ಯಾವಾಗಲೂ ಓದುತ್ತಿರಬೇಕು ಎನ್ನುವ ಮನೋಭಾವ ಅವರದಾಗಿತ್ತು. ರಾಮಯ್ಯನವರನ್ನು ಮೇಷ್ಟ್ರು ಭೇಟಿಯಾದರೆ, ’ಮೇಷ್ಟ್ರೇ ನನ್ನ ಮಗ ರಮೇಶ ಹೇಗೆ ಓದುತ್ತಿದ್ದಾನೆ? ಈ ಸಲ ಅವನು ಫಸ್ಟ್ ಬರುತ್ತಾನೆ ಅಲ್ಲವೇ ಎಂದು ಕೇಳುತ್ತಿದ್ದರು. ಶಾಲಾ ಮೇಷ್ಟ್ರುಗಳು ’ರಾಮಯ್ಯನವರೇ ನೀವು ಸ್ವಲ್ಪವು ಅನುಮಾನ ಪಡುವುದು ಬೇಡ ನೂರಕ್ಕೆ ನೂರು ರಮೇಶ, ಇಡೀ ನಮ್ಮ ತಾಲೂಕಿಗೆ ಅಲ್ಲ, ಇಡೀ ಜಿಲ್ಲೆಗೆ ಮೊದಲು ಬರುತ್ತಾನೆ’ ಎನ್ನುತ್ತಿದ್ದರು.

ಮೇಷ್ಟ್ರು ರಾಮಯ್ಯನವರೇ ಸತೀಶನ ಬಗ್ಗೆ ಏನೂ ಕೇಳಲಿಲ್ಲವಲ್ಲ’ ಎಂದು ಪ್ರಶ್ನಿಸಿದಾಗ ಅವನೊಬ್ಬ ಅಪ್ರಯೋಜಕ, ದಡ್ಡ. ಅವನಿಗೆ ಆಟದಲ್ಲಿರುವಷ್ಟು ಆಸಕ್ತಿ ಪಾಠದಲಿಲ್ಲ ಎಂದು ಬಿಟ್ಟರು. ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆ. ಇಬ್ಬರೂ ಮಕ್ಕಳು, ತಂದೆ ಆಶೀರ್ವಾದ ಪಡೆಯಲು ಬರುತ್ತಾರೆ. ತಂದೆ ರಮೇಶನನ್ನು ಅಪ್ಪಿಕೊಳ್ಳುತ್ತಾ ಈ ಬಾರಿ ಒಳ್ಳೆಯ ಅಂಕಗಳಿಸಿ ರಾಜ್ಯಕ್ಕೆ ಪ್ರಥಮ ಎನ್ನಿಸಿಕೋ ಎಂದು ಹಾರೈಸಿದರು.

ಸತೀಶ್ ಆಶೀರ್ವಾದ ಪಡೆಯಲು ಬಂದಾಗ ರಾಮಯ್ಯನವರು, ’ನಿನಗೆ ಆಶೀರ್ವಾದ ಮಾಡಿದರೂ ಒಂದೇ, ಮಾಡದಿದ್ದರು ಒಂದೇ ಎಂದು ಮೂದಲಿಸಿದರು. ಒಂದೆರಡು ತಿಂಗಳಲ್ಲಿ ಪರೀಕ್ಷೆಯ ಫಲಿತಾಂಶ ಹೊರ ಬಂದಿತ್ತು. ರಮೇಶ್ ನಿರೀಕ್ಷೆಯಂತೆ ಒಳ್ಳೆಯ ಅಂಕ ಗಳಿಸಿದ್ದ. ಸತೀಶ್ ಎರಡನೇ ದರ್ಜೆಯಲ್ಲಿ ಉತೀರ್ಣನಾಗಿದ್ದ. ಅದೇ ಸಂದರ್ಭದಲ್ಲಿ ಮಾಧ್ಯಮದವರು ಮನೆಗೆ ಬಂದಿದ್ದರು. ಇದನ್ನ ಕಂಡು ರಾಮಯ್ಯ ಬೀಗಿದ್ದರು.

ಆದರೆ ಮಾದ್ಯಮದವರು ಬಂದಿದ್ದು ರಮೇಶನ ಸಂದರ್ಶನಕ್ಕಲ್ಲ. ಸತೀಶ್ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಅಧಿಕ ರನ್ ಬಾರಿಸಿ ಹೆಸರು ಗಳಿಸಿದ್ದ. ಹೀಗಾಗಿ ಅವನನ್ನು ಸಂದರ್ಶನ ಮಾಡಲು ಮಾಧ್ಯಮದವರು ಬಂದಿದ್ದರು. ಅದನ್ನು ಕೇಳಿ ರಾಮಯ್ಯನವರು ದಿಗ್ಭ್ರಮೆಗೊಳಗಾದರು.
ನೀತಿ: ಮಕ್ಕಳ ಬಗ್ಗೆ ಯಾರೂ ಕೂಡ ತಾರತಮ್ಯ ಮಾಡಬಾರದು. ಪ್ರತಿಯೊಬ್ಬರಲ್ಲಿಯೂ ವಿಶೇಷವಾದ ಬುದ್ದಿವಂತಿಕೆ, ಕೌಶಲ್ಯ ಇರುತ್ತದೆ. ಮಕ್ಕಳ ಅಭಿರುಚಿಗೆ ಪೂರಕವಾದ ಪ್ರೋತ್ಸಾಹವನ್ನ ಪೋಷಕರು ನೀಡಬೇಕಷ್ಟೆ.

Spread the love

Related Articles

Leave a Reply

Your email address will not be published. Required fields are marked *

Back to top button