80 ಸಾವಿರ ಮೌಲ್ಯದ ಮೊಬೈಲ್ ಬಿಟ್ಟಿದ್ದ ಪ್ರಯಾಣಿಕ; ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಹುಬ್ಬಳ್ಳಿ: ಅದೆಷ್ಟೊ ಮಂದಿ ಆಟೋದಲ್ಲಿ ಪ್ರಯಾಣ ಮಾಡಿ ಸ್ಥಳ ಬಂದಾಗ ಗಡಿಬಿಡಿಯಲ್ಲಿ ಇಳಿಯುವಾಗ ವಸ್ತುಗಳನ್ನು ಮರೆತು ಬಿಡುತ್ತಾರೆ. ಆಗ ಕೆಲ ಚಾಲಕರು ಆ ವಸ್ತುಗಳನ್ನು ನೋಡಿಯೂ ಸುಮ್ಮನಿದ್ದು ಬಳಿಕ ಅದರ ಉಪಯೋಗ ಪಡೆದುಕೊಳ್ತಾರೆ. ಇನ್ನು ಕೆಲ ಚಾಲಕರು ಪ್ರಾಮಾಣಿಕವಾಗಿ ಅದನ್ನ ಹತ್ತಿರದ ಪೊಲೀಸ್ ಠಾಣೆಗೆ ತಲುಪಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಚಾಲಕ ಆಟೋದಲ್ಲೇ ಮೊಬೈಲ್ ಬಿಟ್ಟು ಹೋಗಿದ್ದ ಪ್ರಯಾಣಿಕನಿಗೆ ಪೊಲೀಸರ ಸಮ್ಮುಖದಲ್ಲಿ ಹಿಂದಿರುಗಿಸುವ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದಾನೆ.
ನಗರದ ನಿವಾಸಿ ಚಿತ್ತರಂಜನ್ ಎಂಬುವವರು ಹಳೇ ಬಸ್ ನಿಲ್ದಾಣದ ಬಳಿ ಆಟೋದಲ್ಲಿ ಸುಮಾರು 80 ಸಾವಿರ ಮೌಲ್ಯದ ಫೋನ್ ಬಿಟ್ಟು ಹೋಗಿದ್ದರು. ಪ್ರಯಾಣಿಕ ಮರೆತು ಬಿಟ್ಟು ಹೋದ ಫೋನ್ ಗಮನಿಸಿದ ಆಟೋ ಚಾಲಕ ರಾಜು ಮಲ್ಲೇಶಪ್ಪ ಹನುಮಶೆಟ್ಟರ್ ಫೋನ್ ಅನ್ನು ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ತನ್ನ ಆಟೋದಲ್ಲಿ ಸಿಕ್ಕ ಮೊಬೈಲ್ ಅನ್ನು ಉಪನಗರ ಪೊಲೀಸ್ ಠಾಣೆಗೆ ನೀಡಿದ್ದು, ಈ ವೇಳೆ ಪೊಲೀಸರು ತನಿಖೆ ನಡೆಸಿ ವಾರಸುದಾರ ಚಿತ್ತರಂಜನ್ ರನ್ನ ಠಾಣೆಗೆ ಕರೆಸಿಕೊಂಡು ಆಟೋ ಚಾಲಕ ರಾಜು ಹನುಮಶೆಟ್ಟರ್ ಸಮ್ಮಖದಲ್ಲಿಯೇ ಮೊಬೈಲ್ನ್ನು ಹಿಂದಿರುಗಿಸಿದ್ದಾರೆ. ಇನ್ನು ಆಟೋ ಚಾಲಕನ ಕಾರ್ಯಕ್ಕೆ ಉಪನಗರ ಠಾಣೆಯ ಪೊಲೀಸರು, ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
