ಎದೆಹಾಲಿನ ಮಹತ್ವ ತಿಳಿಸಿದ ರಾಧಿಕಾ ಪಂಡಿತ್: ಬದುಕಿನ ಮಹತ್ವಪೂರ್ಣ ಉಡುಗೊರೆಯನ್ನ ದಾನ ಮಾಡಿ ಎಂದ ನಟಿ

ಸ್ಯಾಂಡಲ್ ವುಡ್ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ಯಶ್ ಕೈ ಹಿಡಿದ ಬಳಿಕ ಸಿನಿಮಾ ರಂಗದಿಂದ ದೂರವೇ ಉಳಿದು ಬಿಟ್ಟಿದ್ದಾರೆ. ಎರಡು ಮುದ್ದಿನ ಮಕ್ಕಳ ತಾಯಿಯಾಗಿರೋ ರಾಧಿಕಾ ಪಂಡಿತ್ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರೋ ನಟಿ ಇದೀಗ ಎದೆ ಹಾಲು ದನದ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ.
ಪ್ರತಿಯೊಂದು ಮಗುವಿನ ಬೆಳವಣಿಗೆಗೂ ಎದೆ ಹಾಲು ಅತ್ಯಮೂಲ್ಯ,. ಮಗುವಿಗೆ ಕನಿಷ್ಟ ಆರು ತಿಂಗಳವರೆಗೂ ಎದೆಹಾಲಿನ ಹೊರತು ಬೇರೆನೂ ನೀಡದಿರಲು ವೈದ್ಯರು ಸೂಚಿಸುತ್ತಾರೆ. ಆದರೆ ಇಂದಿನ ಸಾಕಷ್ಟು ತಾಯಂದಿರಿಗೆ ಎದೆಹಾಲು ಇರೋದಿಲ್ಲ. ಇದೀಗ ನಟಿ ರಾಧಿಕಾ ಪಂಡಿತ್ ಮಕ್ಕಳಿಗೆ ಎದೆ ಹಾಲು ಎಷ್ಟು ಮುಖ್ಯ? ಅಗತ್ಯವಿರುವ ಶಿಶುಗಳಿಗೆ ಎದೆಹಾಲು ದಾನ ಹೇಗೆ ಪ್ರಯೋಜನಕಾರಿಯಾಗಲಿದೆ? ಎದೆ ಹಾಲು ಬ್ಯಾಂಕ್ ಗಳ ಮಹತ್ವ ಏನು ಅನ್ನೋದನ್ನ ವಿಡಿಯೋ ಮೂಲಕ ತಿಳಿಸಿದ್ದಾರೆ.
‘‘ಬದುಕಿನ ಅತ್ಯಂತ ಮಹತ್ವಪೂರ್ಣ ಉಡುಗೊರೆಗಳಲ್ಲಿ ಎದೆಹಾಲು ಮುಖ್ಯವಾದದ್ದು. ಎದೆಹಾಲಿನಲ್ಲಿ ಇರುವ ಅಂಶಗಳನ್ನು ಯಾವುದಕ್ಕೂ ಹೋಲಿಸಲು ಆಗುವುದಿಲ್ಲ. ಎಳೆ ಮಕ್ಕಳಿಗೆ ಇದು ಬಹಳ ಮುಖ್ಯ. ಎದೆ ಹಾಲಿನಲ್ಲಿ ಸಿಗುವ ಪೋಷಕಾಂಶಗಳು ಅಥವಾ ರೋಗ ನಿರೋಧಕ ಗುಣವನ್ನು ಮತ್ಯಾವುದೂ ನೀಡುವುದು ಸಾಧ್ಯವಿಲ್ಲ’’
‘‘ಕೆಲವು ಸಂದರ್ಭಗಳಲ್ಲಿ ತಾಯಂದಿರಲ್ಲಿ ಅಗತ್ಯವಿದ್ದಷ್ಟು ಹಾಲು ಉತ್ಪಾದನೆಯಾದೇ ಇರಬಹುದು. ಅಂತಹ ತಾಯಂದಿರ ಮಕ್ಕಳಿಗೆ ಸಹಾಯವಾಗುವ ದೃಷ್ಟಿಯಿಂದ ಎದೆಹಾಲು ಬ್ಯಾಂಕ್’ಗಳನ್ನು ಸ್ಥಾಪಿಸಲಾಗಿದೆ. ಯಾರು ಸಶಕ್ತರೋ ಅವರು ಎದೆಹಾಲನ್ನು ದಾನ ಮಾಡಬಹುದು. ನಿಮ್ಮ ಜಿಲ್ಲೆಗಳಲ್ಲಿರುವ ಮಿಲ್ಕ್ ಬ್ಯಾಂಕ್ಗಳಲ್ಲಿ ದಾನ ಮಾಡಬಹುದು. ಇದು ಅಗತ್ಯವಿರುವವರಿಗೆ ಸಹಾಯವಾಗಲಿದೆ’’ ಎಂದು ಸಂದೇಶ ನೀಡಿದ್ದಾರೆ. ಜೊತೆಗೆ ಈ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಿ ಎಂದು ನಟಿ ರಾಧಿಕಾ ಪಂಡಿತ್ ಕೇಳಿಕೊಂಡಿದ್ದಾರೆ.
ಮಾರ್ಚ್ 27ರಂದು ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಎಂಬ ಉದ್ದೇಶದಿಂದ ಈ ಜಾಥಾ ಹಮ್ಮಿಕೊಂಡಿದ್ದು ಜಾಥಾದಲ್ಲಿ ಭಾಗವಹಿಸುವಂತೆ ರಾಧಿಕಾ ಪಂಡಿತ್ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.




