ಜೇಮ್ಸ್ ಚಿತ್ರಮಂದಿರಗಳಿಂದ ತೆಗೆಯುವಂತಿಲ್ಲ: ಬೊಮ್ಮಾಯಿ

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಚಿತ್ರವನ್ನ ಚಿತ್ರಮಂದಿರದಿಂದ ತೆಗೆಯಲಾಗುತ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಚಿತ್ರವನ್ನ ಚಿತ್ರಮಂದಿರದಿಂದ ತೆಗೆಯಬಾರದು ಎಂದಿದ್ದಾರೆ.
ಈ ಬಗ್ಗೆ ಮಾದ್ಯಮಗಳ ಜೊತೆ ಮಾತನಾಡಿದ ಬೊಮ್ಮಾಯಿ ಜೇಮ್ಸ್ ಚಿತ್ರದ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರೊಂದಿಗೆ ಮಾತನಾಡಿದ್ದೇನೆ. ತೊಂದರೆಯಾಗಿರುವಲ್ಲಿ ಕೂಡಲೇ ಸರಿಪಡಿಸಲು ತಿಳಿಸಿದ್ದೇನೆ. ಅನಾವಶ್ಯಕವಾಗಿ ಜೇಮ್ಸ್ ಸಿನಿಮಾವನ್ನು ಯಾರೂ ಚಿತ್ರಮಂದಿರಗಳಿಂದ ತೆಗೆಯುವಂತಿಲ್ಲ. ಸಂಬಂಧಪಟ್ಟ ನಿರ್ಮಾಪಕರು, ಚಿತ್ರಮಂದಿರದವರಿಗೆ ಇದನ್ನು ಸರಿಪಡಿಸುವ ಅಧಿಕಾರವಿದೆ’ ಎಂದು ಹೇಳಿದರು.
”ಜೇಮ್ಸ್ ಚಿತ್ರಪ್ರದರ್ಶನದಲ್ಲಿ ಆಗಿರುವ ಗೊಂದಲಗಳ ಬಗ್ಗೆ ನಟ ಶಿವರಾಜ್ ಕುಮಾರ್ ಅವರ ಬಳಿಯೂ ಮಾತನಾಡಿದ್ದೇನೆ. ತೊಂದರೆ ಇದ್ದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಥವಾ ನನ್ನ ಗಮನಕ್ಕೆ ತರಬೇಕೆಂದು ತಿಳಿಸಿದ್ದೇನೆ. ಅವರೂ ಸಹ ಒಪ್ಪಿದ್ದಾರೆ. ಕಾಂಗ್ರೆಸ್ ನವರು ಸಿನಿಮಾದಲ್ಲಿಯೂ ರಾಜಕಾರಣ ಮಾಡುವಷ್ಟು ಕೆಳಮಟ್ಟಕ್ಕೆ ಹೋಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
