ನಕಲಿ ಛಾಪ ಕಾಗದ ಬಳಸಿ ಸೈಟ್ ಮಾರಾಟ ದಂಧೆ; ಎಂಟು ಆರೋಪಿಗಳು ಬಂಧನ

ದೇವನಹಳ್ಳಿ: ಎರಡು ಸಾವಿರ ಇಸವಿಯಲ್ಲಿ ಕರೀಂಲಾಲ್ ತೆಲಗಿಯ ಬಹುಕೋಟಿ ಛಾಪಾಕಾಗದ ಹಗರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿತ್ತು. ಅದೇ ರೀತಿ ನಕಲಿ ಛಾಪಾ ಕಾಗದ ಮತ್ತು ಸೀಲ್ ಗಳನ್ನು ಬಳಸಿ ನೂರಾರು ಕೋಟಿ ಗುಳುಂ ಮಾಡಿರುವ ಪ್ರಕರಣ ಇದೀಗ ಯಲಹಂಕದಲ್ಲಿ ಬೆಳಕಿಗೆ ಬಂದಿದೆ.
ಸಬ್ ರಿಜಿಸ್ಟರ್ ನಕಲಿ ಸೀಲು ಬಳಸಿ ನಕಲಿ ಛಾಪಾ ಕಾಗದ ದಂಧೆ ನಡೆಸುತಿದ್ದ ಒಬ್ಬ ಮಹಿಳೆಯು ಸೇರಿ ಒಟ್ಟು ಎಂಟು ಜನರ ಖತರ್ನಾಕ್ ಗ್ಯಾಂಗನ್ನು ಯಲಹಂಕ ಉಪನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ನಕಲಿ ಛಾಪಾ ಕಾಗದ ಮತ್ತು ಸಬ್ ರಿಜಿಸ್ಟರ್ ಕಚೇರಿಯ ನಕಲಿ ಸೀಲುಗಳನ್ನು ಬಳಸಿ 2000 ನೇ ಇಸವಿಗಿಂತಲೂ ಹಿಂದಿನ ಖಾಲಿ ನಿವೇಶನಗಳು ಮತ್ತು ವಿದೇಶಗಳಲ್ಲಿ ವಾಸವಾಗಿರುವವರ ಸೈಟ್ ಗಳನ್ನು ಟಾರ್ಗೆಟ್ ಮಾಡಿ ಅವುಗಳಿಗೆ ನಕಲಿ ದಾಖಲಾತಿ ಸೃಷ್ಟಿಸಿ ಅರೋಪಿಗಳು ಸೈಟುಗಳನ್ನು ಮಾರಾಟ ಮಾಡುತ್ತಿದ್ದರು.
ಬೆಂಗಳೂರಿನಲ್ಲಿ ಸೈಟ್ ಖರೀದಿಸಿ ಮನೆ ಕಟ್ಟಿಕೊಳ್ಳಬೇಕು ಎಂದು ಮಧ್ಯಮ ವರ್ಗದವರು ಸೇರಿದಂತೆ ಎಲ್ಲರು ಕನಸು ಕಾಣುತ್ತಾರೆ ನಿವೇಶನಗಳನ್ನು ಹುಡುಕುತ್ತಾ ಹೋದಾಗ ಎಲ್ಲಿ ಸ್ವಲ್ಪ ಕಡಿಮೆ ಬೆಲೆಗೆ ಜಾಗ ಸಿಗುವುದೋ ಅಲ್ಲಿ ಸೈಟ್ ಖರೀದಿಸಲು ಮುಂದಾಗುವ ಜನರನ್ನೆ ಟಾರ್ಗೆಟ್ ಮಾಡಿಕೊಂಡು ಈ ಗ್ಯಾಂಗ್ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೈಟ್ ಗಳನ್ನು ಕಡಿಮೆ ಬೆಲೆಗೆ ಅವರಿಗೆ ಮಾರಾಟ ಮಾಡುತ್ತಿದ್ದರು.
ಯಲಹಂಕ ತಾಲೂಕಿನ ಯಲಹಂಕ ಉಪನಗರ, ಚಿಕ್ಕಬೊಮ್ಮಸಂದ್ರ, ಜ್ಯುಡಿಷಿಯಲ್ ಲೇಔಟ್, ಚಿಕ್ಕಜಾಲ ಹೀಗೆ ಸುತ್ತಮುತ್ತಾ ಈ ಖದೀಮರ ಕೈಚಳಕ ಜೋರಾಗಿತ್ತು.
ಇವರು 1980, 90 ಮತ್ತು 2000 ಇಸವಿಗೂ ಹಿಂದಿನ ವಾರಸುದಾರರಿಲ್ಲದ, ಗಿಡಗಂಟೆ ಬೆಳೆದುಕೊಂಡು ಖಾಲಿ ಇರುವ ಸೈಟ್ ಗಳನ್ನು ಇವರುಗಳು ಹುಡುಕಿ ಈ ಕಳ್ಳ ದಂಧೆಗೆ ಬಳಸಿಕೊಳ್ಳುತ್ತಿದ್ದರು
ಈ ವಂಚಕರಿಂದ ಎರಡು ಕೋಟಿ ಮೌಲ್ಯದ 12 ಸೈಟ್ ಗಳಿಗೆ ನಕಲಿ ದಾಖಲೆಗಳು ಸೃಷ್ಟಿಸಿ ಮಾರಾಟ ಮಾಡಿರೋದು ಸದ್ಯಕ್ಕೆ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ನಕಲಿ ಛಾಪಾ ಕಾಗದದ ಬೇರುಗಳ ಹುಡುಕಾಟದಲ್ಲಿದ್ದಾರೆ. ಪೊಲೀಸರ ಇನ್ನಷ್ಟು ತನಿಖೆಯಿಂದ ಈ ಖದೀಮರ ಇನ್ನಷ್ಟು ವಂಚನೆ ಬೆಳಕಿಗೆ ಬರಲಿದೆ.
