ಮೇಕೆದಾಟು ಯೋಜನೆ ಹೆಸರಲ್ಲಿ ಜನರಿಗೆ ಮಕ್ಮಲ್ ಟೋಪಿ: ಹೆಚ್ ಡಿ ಕೆ ಗರಂ

ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕರೆಯಲ್ಲಿ ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತಾಡಿ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನ ಕುಟುಕಿದರು. ಅಲ್ಲದೇ ಇದೇ ವೇಳೆ ಹೆಸರು ಹೇಳದೆ ಸಿಪಿ ಯೋಗೇಶ್ವರ್ ವಿರುದ್ದವೂ ಕಿಡಿಕಾರಿದರು.
ಇನ್ನು ಮಾಧ್ಯಮಗಳು ಡಿಕೆ ಶಿವಕುಮಾರ್ ಮೇಕೆದಾಟು ವಿಚಾರವಾಗಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಮೇಕೆದಾಟು ಪಾದಯಾತ್ರೆ ಹಣೆಬರಹ ನನಗೆ ಮೊದಲೇ ಗೊತ್ತು. ಈಗ ಎಲ್ಲಿಗೆ ಬಂದಿದೆ ಅಂದ್ರೆ, ಹತ್ತು ದಿನಗಳ ಕಾಲ ಬಾರಿ ಮೃಷ್ಟನ್ನ ಭೋಜನ, ತಿಂದು ಪಾದಯಾತ್ರೆ ಮಾಡಿದ್ದಷ್ಟೆ ಲಾಭ ಎಂದು ವ್ಯಂಗ್ಯವಾಡಿದರು. ಇನ್ನು ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ಅನುದಾನ ಘೋಷಣೆಯಾಗಿದೆ. ಒಂದು ಸಾವಿರ ಕೋಟಿ ತಗೊಂಡು ಡಿಕೆ ಶಿವಕುಮಾರ್ ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.
ಸಾವಿರ ಕೋಟಿಯಲ್ಲಿ ಕೆಲಸ ಮಾಡಲು ಸಾಧ್ಯವೇ? ನಾಳೆ ಬೆಳಗ್ಗೆಯೇ ಮೇಕೆದಾಟು ಯೋಜನೆ ಕೆಲಸ ಆರಂಭವಾಗುತ್ತೋ? ಈ ಎರಡು ರಾಷ್ಟ್ರೀಯ ಪಕ್ಷಗಳು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿವೆ. ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಲು ಹೊರಟಿವೆ ಎಂದು ಆರೋಪಿಸಿದರು. ಅಲ್ಲದೆ ಈ ಮಕ್ಮಲ್ ಟೋಪಿ, ನಾಮ ಹಾಕಿರುವ ಘಟನೆಗಳನ್ನು ವಿಧಾನಸಭಾ ಕಲಾಪದಲ್ಲಿ ಚರ್ಚೆ ಮಾಡುತ್ತೇನೆ. ಇನ್ನೂ 15 ದಿನಗಳ ಕಾಲ ಸಮಯವಿದೆ ನನಗೆ ತಾಳ್ಮೆ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
