ಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಮೈಸೂರು: ಮಹಾಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದ ನಾಳೆ(ಮಾ.2) ಬೆಳಗಿನವರೆಗೆ ನಗರದಾದ್ಯಂತ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ಮೈಸೂರಿನ ಎಲ್ಲಾ ಶಿವನ ದೇವಾಲಯಗಳಿಗೆ ಭಕ್ತರು ಭೇಟಿ ನೀಡುವುದರಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿರೋದಾಗಿ ಹೇಳಿದರು.
ರಾತ್ರಿಯಿಡೀ ಜಾಗರಣೆ, ಭಜನೆ, ಕೀರ್ತನೆಯಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಮಹಿಳೆಯರು, ವೃದ್ಧರು, ಭಕ್ತಾದಿಗಳ ಸುರಕ್ಷತೆಗಾಗಿ ಬಿಗಿಭದ್ರತೆ ಒದಗಿಸಲಾಗಿದೆ. ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಿ ಅಸಭ್ಯ ವರ್ತನೆ, ಪಾಟ್ಗಳನ್ನು ಒಡೆದು ಹಾಕುವುದು, ತೆಂಗಿನಮರಗಳಲ್ಲಿ ಕಾಯಿ, ಎಳನೀರು ಕದಿಯುವುದು, ಇನ್ನಿತರೆ ಹಣ್ಣಿನ ಗಿಡಗಳಲ್ಲಿ ಹಣ್ಣು ಕೀಳುವುದು ಕಂಡುಬಂದಲ್ಲಿ ರಾತ್ರಿ ಗಸ್ತಿನಲ್ಲಿರುವ ಗರುಡ, ಪಿಸಿಆರ್ ಸಿಬ್ಬಂದಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.




