Latestಮೆಟ್ರೋರಾಜಕೀಯ

ಜನರ ನೋವು ಮರೆತು ತಮ್ಮ ಸಾಧನೆ ಹೇಳಹೊರಟ ಮೋದಿಗೆ ಹೃದಯವಿದೆಯೆ?; ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ಕಳೆದ ಮಾರ್ಚ್ ತಿಂಗಳಿಂದ ದೇಶದಲ್ಲಿ ಏನೇನಾಯಿತು ಎಂದು ಜನರು ಮರೆತಿಲ್ಲ. ಹೃದಯವಿರುವ ಮನುಷ್ಯನಿಗೆ ಭೀಕರ ಪಶ್ಚಾತ್ತಾಪ, ಪಾಪಪ್ರಜ್ಞೆ ಕಾಡಬೇಕಾಗಿತ್ತು. ಅದರ ಬದಲಾಗಿ ಕೊರೋನಾದ ವಿರುದ್ಧ ವಿಜಯ ಸಾಧಿಸಿಬಿಟ್ಟಿದ್ದೇವೆ ಎಂಬಂತೆ ಮೋದಿ ವಿಶ್ವದ ಜನರಿಗೆ ತಿಳಿಸಲು ಹೊರಟಿರುವುದನ್ನು ಏನೆನ್ನಬೇಕು? ಇದನ್ನು ನೋಡಿದರೆ ನಮ್ಮ ಪ್ರಧಾನಿಯ ಹೃದಯದಲ್ಲಿ ಒಬ್ಬ ಮನುಷ್ಯನಿದ್ದಾನೆ ಎನ್ನಿಸುತ್ತದೆಯೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮೋದಿಯವರು ಜೂನ್ 30ರಂದು ‘ಕೋವಿನ್ ಗ್ಲೋಬಲ್ ಕಾನ್‍ಕ್ಲೇವ್’ ನಡೆಸಲು ಉದ್ದೇಶಿಸಿದ್ದಾರೆಂಬ ಮಾಹಿತಿ ಇದೆ. ಈ ಸಮಾವೇಶದಲ್ಲಿ ಭಾರತವು ಕೊರೋನವನ್ನು ಎದುರಿಸಿದ ರೀತಿಗಳನ್ನು ತಿಳಿಸುವುದಾಗಿ ಹೇಳಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಮತ್ತು ಅಸೂಕ್ಷ್ಮವಾದ ವಿಷಯ ಎಂದ ಉಸಿದ್ದರಾಮಯ್ಯ ಟೀಕಿಸಿದ್ದಾರೆ.

ಮೋದಿಯವರು ತಮ್ಮ ಸಾಧನೆಗಳ ಜಾಗತಿಕ ಸಮಾವೇಶ ನಡೆಸುವ ಬದಲು ವಿಶ್ವದ ನಾಯಕರುಗಳನ್ನು ಒತ್ತಾಯಿಸಿ ಕೊರೋನ ಲಸಿಕೆಯ ಮೇಲಿನ ಪೇಟೆಂಟುಗಳನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಬೇಕು.
ವಿಶ್ವದ ಜನ ಸಮುದಾಯಗಳ ಆರೋಗ್ಯವು ತುರ್ತುಪರಿಸ್ಥಿತಿಯಲ್ಲಿರುವಾಗ, ಕೊರೋನಾದ ನಿರ್ವಹಣೆಯನ್ನು ಆಯಾ ದೇಶಗಳಿಗೆ ಬಿಡುವುದು ಹಾಗೂ ಔಷಧ ಕಂಪೆನಿಗಳ ಲೂಟಿಗೆ ಅವಕಾಶ ಮಾಡಿಕೊಡುವುದು ಅತ್ಯಂತ ಅಪಾಯಕಾರಿಯಾದ ಸಂಗತಿ ಎಂದು ತಿಳಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಜಾಗತಿಕ ಸಮಸ್ಯೆಗೆ ಜಾಗತಿಕ ಪರಿಹಾರಗಳೇ ಬೇಕಾಗುತ್ತವೆಯೆ ಹೊರತು ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಲಾಗದು. ಆದ್ದರಿಂದ ವಿಶ್ವ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳು ಕ್ರಿಯಾಶೀಲಗೊಂಡು ಸದ್ಯದ ತುರ್ತುಪರಿಸ್ಥಿತಿಯನ್ನು ನಿಭಾಯಿಸುವ ಸಾಮೂಹಿಕ ಪ್ರಯತ್ನಗಳಾಗಬೇಕೆಂದು ಒತ್ತಾಯಿಸಬೇಕು. ಯಾಕೆಂದರೆ ವಿಶ್ವದ ಯಾವುದೋ ಭಾಗದಲ್ಲಿ ರೂಪಾಂತರಗೊಂಡ ವೈರಸ್ಸು ಬೆಂಕಿಯಂತೆ ಜಗತ್ತನ್ನು ಆವರಿಸಿ ಬಿಡಬಹುದು. ಹಾಗಾಗಿ ವಿವೇಕವುಳ್ಳ, ವೈಜ್ಞಾನಿಕ ಮನೋಭಾವವುಳ್ಳ ಮನುಷ್ಯರು ಒತ್ತಾಯಿಸಬೇಕಾದ ಕ್ರಮಗಳಿವು.
ಇವುಗಳ ಜೊತೆಗೆ ಜಗತ್ತಿನ ಅನೇಕ ದೇಶಗಳು ತೆಗೆದುಕೊಂಡಿರುವ ಆರ್ಥಿಕ ಪುನಶ್ಚೇತನದ ಪ್ಯಾಕೇಜುಗಳನ್ನು ಘೋಷಿಸಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಲಹೆಗಳನ್ನು ಪ್ರಧಾನಿ ಮೋದಿಯವರಿಗೆ ತಿಳಿಸಿ ಅತ್ಯಂತ ತುರ್ತಾಗಿ ಮನುಷ್ಯ ಪರವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವ ಜವಾಬ್ಧಾರಿ ರಾಜ್ಯದ ಆಯ್ಕೆಯಾದ ಸಂಸದರು ಮತ್ತು ಕೇಂದ್ರ ಸಚಿವರುಗಳ ಮೇಲೆ ಇದೆ. ರಾಜ್ಯದ ಮುಖ್ಯಮಂತ್ರಿಗಳೂ ಕೂಡ ಈ ಕುರಿತು ಪ್ರಧಾನಿಗಳನ್ನು ಒತ್ತಾಯಿಸಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪ್ರತಿಯೊಬ್ಬರಿಗೂ ಲಸಿಕೆ, ಹೊಟ್ಟೆಗೆ ಅನ್ನ, ಒಂದಿಷ್ಟು ಆರ್ಥಿಕ ನೆರವು, ಉಚಿತ ಚಿಕಿತ್ಸೆ ನೀಡದಿದ್ದರೆ ಭಾರತ ವಿಶ್ವ ಗುರುವಾಗುವುದಿರಲಿ ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕ ಮತ್ತಿತರ ಸರೀಕ ದೇಶಗಳ ಎದುರು ತಲೆ ಎತ್ತಿ ನಿಲ್ಲುವಂತೆ ಮಾಡಲಾಗದು ಎಂಬ ಸತ್ಯವನ್ನು ಪ್ರಧಾನಿ ಮೋದಿಯವರಿಗೆ ಮನವರಿಕೆ ಮಾಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಡೆಲ್ಟಾ ಪ್ಲಸ್: ಸಮರೋಪಾಧಿ ಕ್ರಮಕ್ಕೆ ಸಲಹೆ

ಕೊರೊನಾ ಎರಡನೇ ಅಲೆ ಮುಗಿಯುವ ಮೊದಲೇ ಡೆಲ್ಟಾ ಪ್ಲಸ್ ಎಂಬ ಇನ್ನಷ್ಟು ಉಗ್ರವಾದ ಕೊರೋನಾದ ರೂಪಾಂತರಿ ವೈರಸ್ಸು ದೇಶದಲ್ಲಿ ಮತ್ತೆ ವೇಗವಾಗಿ ಹರಡುವ ಭೀತಿ ಸೃಷ್ಟಿಯಾಗಿದೆ. ಇದನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಲವು ರೀತಿಯ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಬೇಕಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವಾರು ಸಲಹೆ ನೀಡಿದ್ದಾರೆ.

ದೇಶದ ಶೇ.80ರಷ್ಟು ಜನರಿಗೆ ಲಸಿಕೆ ನೀಡುವವರೆಗೆ ಅಂತರರಾಷ್ಟ್ರೀಯ ವಿಮಾನಗಳನ್ನು ನಿರ್ಬಂಧಿಸುವುದು ಸೂಕ್ತ. ದೇಶದ ಯಾವ ಯಾವ ಸ್ಥಳಗಳಲ್ಲಿ ಕೊರೋನ ವೈರಸ್ಸಿನ ಡೆಲ್ಟಾ ಪ್ಲಸ್ ಪ್ರಭೇದ ಪತ್ತೆಯಾಗಿದೆಯೊ ಆ ಸ್ಥಳಗಳ ಕುರಿತು ತೀವ್ರ ನಿಗಾ ವಹಿಸಿ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಮೂರನೇ ಅಲೆಯ ಕುರಿತು ತಜ್ಞರು ಮಾಡಿರುವ ಶಿಫಾರಸುಗಳಂತೆ, ಖಾಸಗಿ ಆಸ್ಪತ್ರೆಗಳು ಕಂಪೆನಿಗಳಿಂದ ಲಸಿಕೆಗಳನ್ನು ಸ್ವೀಕರಿಸಿ ಗರಿಷ್ಠ 10 ದಿನಗಳ ಕಾಲ ಮಾತ್ರ ದಾಸ್ತಾನಿರಿಸಿಕೊಳ್ಳಬೇಕೆಂಬ ಕುರಿತು ಆದೇಶ ಹೊರಡಿಸುವಂತೆ ತಿಳಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಮಾಡಬೇಕಾದ ಕೆಲಸ ಇದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button