Breaking NewsLatestಜಿಲ್ಲಾ ಸುದ್ದಿರಾಜಕೀಯರಾಮನಗರ

ಸಚಿವ ಯೋಗೇಶ್ವರ್​​​​​​​ಗೆ ರಾಮನಗರದಲ್ಲಿ ಫಲಿಸದ ‘ಅಳ್ವಿಕೆಯ ಯೋಗ’

– ವಿಶೇಷ ವರದಿ : ರಾಜೇಶ್ ಕೊಂಡಾಪುರ

ರಾಮನಗರ: ಒಂದು‌ ಸರಕಾರವನ್ನು ಉರುಳಿಸಿ, ಮತ್ತೊಂದು ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣವೆಂದು ಬೀಗುತ್ತಾ ಕಾಡಿ, ಬೇಡಿ ಮಂತ್ರಿ ಪದವಿ ಪಡೆದ ಸಿ.ಪಿ. ಯೋಗೇಶ್ವರ್ ರಾಜ್ಯದಲ್ಲಿ ರಲಿ, ಸ್ವತಃ ತವರು ಜಿಲ್ಲೆ ರಾಮನಗರದಲ್ಲಿ ತ್ರಿಶಂಕು ಸ್ಥಿತಿಗೆ ಸಿಕ್ಕಿದ್ದು, ತಾವೇ ಸೃಷ್ಠಿಸಿಕೊಂಡ ಚಕ್ರವ್ಯೂಹದಲ್ಲಿ ತಾವೇ ಉಸಿಗಟ್ಟಿ ನಿಲ್ಲುವಂತಾಗಿದೆ ಈ ಬಗ್ಗೆ ಇಲ್ಲಿದೆ ಸ್ಥೂಲ ಚಿತ್ರಣ….

ರಾಜ್ಯವಿರಲಿ, ಸ್ವತಃ ಚನ್ನಪಟ್ಟಣದಲ್ಲಿ ವಿರೋಧಿಗಳ ಆರೋಪಗಳಿಗೂ ಉತ್ತರ ನೀಡದೆ ಮೌನ ರಾಜಕಾರಣಿ ಅಥವಾ ಶಾಸಕರಾಗಿದ್ದ ಹಾಲಿ ಪ್ರವಾಸೋದ್ಯಮ ಸಚಿವ ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿ ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿ ತೋಳಲಾಡುತ್ತಿದ್ದಾರೆ!

ಹೌದು, 1999ರ ಅಂತ್ಯ ಭಾಗದಿಂದ 2009ರ ವರೆಗೆ ತಾವಾಯಿತು, ತಮ್ಮ ಕ್ಷೇತ್ರವಾಯಿತೆಂದು ಮೌನವಾಗಿ ರಾಜಕಾರಣ ಮಾಡಿಕೊಂಡು ಬರುತ್ತಿದ್ದ ಸಿ.ಪಿ. ಯೋಗೇಶ್ವರ್, ತಮ್ಮ ವಿರೋಧಿಗಳು ಎಷ್ಟೇ ಆರೋಪ ಮಾಡಿದರೂ ಅದಕ್ಕೆ ಅವರ ಮೌನವೇ ಉತ್ತರವಾಗಿತ್ತು. ಇದರಿಂದಾಗಿ ಎರಡು ಬಾರಿ ಕಾಂಗ್ರೆಸ್ ನಲ್ಲಿ ಸಚಿವರಾಗಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೋ ಏನೋ ಅವರು ಸೆಟೆದು ನಿಂತರು. ಇದಕ್ಕೆ ಕಾರಣವಾಗಿದ್ದು ತಮ್ಮ‌ ವಿರುದ್ಧ ಡಿ.ಕೆ.ಶಿವಕುಮಾರ್ ಪದೇ ಪದೇ ಅಡ್ಡಗಾಲು ಹಾಕುತ್ತಿದ್ದಾರೆ ಎನ್ನುವ ಅವರಲ್ಲಿದ್ದ ಭಾವನೆ. ಅಲ್ಲದೇ ಇದು ಸಾರ್ವತ್ರಿಕ ಕೂಡ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಾಗದು.

ವರಸೆ ಬದಲು!

ಯಾವುದಕ್ಕೂ ತಣ್ಣಗೆ ಪ್ರತಿಕ್ರಿಯೆ ನೀಡುತ್ತಾ, ಮೌನ ರಾಜಕಾರಣಿ ಎಂದೇ ಬಿಂಬಿತವಾಗಿದ್ದ ಸೈನಿಕ ಯೋಗೇಶ್ವರ್, 2009-10ರ ನಂತರ ಯುದ್ಧಭೂಮಿಯಲ್ಲಿ ಗುಡುಗುವ ಪಿರಂಗಿಗಳಂತೆ ಗುಡುಗಲಾರಂಭಿಸಿದರು. ಆಗ ಅವರ ಟಾರ್ಗೆಟ್ ಡಿ.ಕೆ. ಶಿವಕುಮಾರ್, ನಂತರದಲ್ಲಿ ಹೆಚ್.ಡಿ. ದೇವೇಗೌಡ ಮತ್ತು ಅವರ ಪುತ್ರ ಕುಮಾರಸ್ವಾಮಿ!

ಒಂದು ಕಾಲದಲ್ಲಿ ದೇವೇಗೌಡ ಮತ್ತು ಅವರ ಕುಟುಂಬದ ವಿರುದ್ಧ ಹರಿಹಾಯುತ್ತಾ, ಅವರ ವಿರುದ್ಧ ತೊಡೆ ತಟ್ಟುತ್ತಾ, ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಪ್ರವರ್ಧಮಾನಕ್ಕೆ ಬಂದಂತೆ ತಾವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕೆನ್ನುವ ಹಿನ್ನಲೆಯಲ್ಲಿ ಮಾತಿನ ದಾಟಿಯನ್ನು ಮೊನಚು ಮಾಡಿಕೊಂಡರು. ಇದಕ್ಕೆ ವೇದಿಕೆಯಾಗಿದ್ದು, ಕ್ಷೇತ್ರಾಭಿವೃದ್ಧಿಯ ನೆಪದಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಾಳೆಯಕ್ಕೆ ಅಪರೇಷನ್ ಕಮಲದ ಮೂಲಕ ಜಿಗಿದಿದ್ದು.

ಈ ವೇಳೆಯಲ್ಲಿ ನಡೆಸ ಲೋಕಸಭೆ ಮತ್ತು ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ದೇವೇಗೌಡ, ಕುಮಾರಸ್ವಾಮಿ‌ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ವಾಕ್ಸಮರ ನಡೆಸಿದರು. ಇದರಿಂದ ರಾಜ್ಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದರೂ ಈ ಎರಡು ಚುನಾವಣೆಯಲ್ಲೂ ಪರಾಭವಗೊಂಡರು.

ಎಂ.ಸಿ. ಅಶ್ವಥ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಮತ್ತೊಂದು ಮರು ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಯೋಗೇಶ್ವರ್, ಸದಾನಂದಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾದರು. ಆಗ ಡಿ.ಕೆ. ಶಿವಕುಮಾರ್ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆಂದು ತನಿಖೆ ಆದೇಶ ನೀಡಿ ಡಿಕೆಶಿಯ ಬದ್ಧ ವೈರ ಕಟ್ಟಿಕೊಂಡರು. ನಂತರ ಬಿಜೆಪಿಯಿಂದಲೂ ಹೊರ ಬಂದ ಯೋಗೇಶ್ವರ್, ಕಾಂಗ್ರೆಸ್ ಸೇರಿದರು. ಅಲ್ಲಿ ಟಿಕೇಟ್ ಸಿಗದೇ ಕೊನೆ ಕ್ಷಣದಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ಗೆದ್ದು ಬಂದು, ಲೋಕಸಭಾ ಉಪ ಚುನಾವಣೆ ವೇಳೆ ಡಿ.ಕೆ. ಸುರೇಶ್ ಸ್ಪರ್ಧಿಸಿದಾಗ ಕಾಂಗ್ರೆಸ್ ತೆಕ್ಕೆಗೆ ಬಂದರು. ಅಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮತ್ತೇ ಬಿಜೆಪಿ‌ ಸೇರ್ಪಡೆಯಾದರು.

ಬಿಜೆಪಿ ಸೇರ್ಪಡೆಗೊಂಡು, ಸ್ವತಃ ಕುಮಾರಸ್ವಾಮಿ ಅವರನ್ನೇ ತಮ್ಮ ವಿರುದ್ಧ ಕಣಕ್ಕಿಳಿಯುವಂತೆ ಪಂಥಾಹ್ವಾನ ನೀಡಿ, ಕೊನೆಗೆ ಎಚ್ಡಿಕೆ ವಿರುದ್ಧ ಪರಾಭಗೊಂಡರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ, ಕಾಂಗ್ರೆಸ್ ಜೊತೆ ಸೇರಿ ಮುಖ್ಯಮಂತ್ರಿಯಾದ್ದರಿಂದ ಬಿಜೆಪಿ ಅಧಿಕಾರಕ್ಕೂ ಬರಲಾಗಲಿಲ್ಲ. ಇದರಿಂದ ಯೋಗೇಶ್ವರ್ ಗೆ ‘ಹಠಯೋಗ’ ಸಿದ್ಧಿಸಲಿಲ್ಲ!

ಅಧಿಕಾರಕ್ಕೆ ತಂದರೂ ಸಿದ್ಧಿಸದ ಯೋಗ !

ಯೋಗೇಶ್ವರ್ ಬಯಸಿದಂತೆ ಬಿಜೆಪಿ ಸರ್ಕಾರ ಬಂತು, ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜೀನಾಮೆ ಕೊಡಿಸಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದಿದ್ದು ನಾನೇ ಎಂದು ಬೀಗಿದರೂ, ಅದರು ಎಂಎಲ್ಸಿ ಮತ್ತು ಮಂತ್ರಿ ಭಾಗ್ಯ ಅಷ್ಟು ಸುಲಭಕ್ಕೆ ಸಿಕ್ಕಲಿಲ್ಲ. ಕೊನೆಗೆ ಪ್ರವಾಸೋದ್ಯಮ ಸಚಿವರಾದ್ರೂ ತಾವು ಬಯಸಿದ ಖಾತೆ ಸಿಗಲಿಲ್ಲ ಎನ್ನುವ ಅಸಮಧಾನ ಈಗ ಸ್ವತಃ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರನ್ನು ಹಗೆ ಕಟ್ಟಿಕೊಂಡರು. ಅಲ್ಲದೇ ರಾಮನಗರದಲ್ಲೂ ಸಾಕಷ್ಟು ವಿರೋಧಗಳನ್ನು ಎದುರಿಸುತ್ತಾ ಜಿಲ್ಲೆಯ ಮಟ್ಟಿಗೆ ಚನ್ನಪಟ್ಟಣಕ್ಕೆ ಮಾತ್ರ ಮಂತ್ರಿ ಎನ್ನುವಂತಾಗಿದ್ದಾರೆ.

ಅತೃಪ್ತಿಯಲ್ಲಿ ಬೇಯುತ್ತಿರುವ ಯೋಗಿ :

ಒಂದು ಕಡೆ ತಾವು ಬಯಸಿದ ಖಾತೆ ಸಿಗಲಿಲ್ಲವೆಂದು ಅಸಮಧಾನಗೊಂಡಿರುವ ಯೋಗೇಶ್ವರ್, ತವರು ಜಿಲ್ಲೆಯ ಉಸ್ತುವಾರಿ ಸಿಗಲಿಲ್ಲವೆನ್ನುವ ಜಿಲ್ಲಾ ರಾಜಕಾರಣದ ಮಟ್ಟಿಗೆ ಯೋಗೇಶ್ವರ್ ಗೆ ಸಾಕಷ್ಟು ಹಿನ್ನಡೆಯೇ.

ಯಡಿಯೂರಪ್ಪ ಜೊತೆ ಸ್ನೇಹ ಭಾವದಲ್ಲಿರುವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ತಮಗೆ ತಮ್ಮ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳನ್ನು ಸ್ವತಃ ಮುಖ್ಯಮಂತ್ರಿಗಳ ಬಳಿಗೆ ಹೋಗಿ ಮಾಡಿಸಿಕೊಳ್ಳುತ್ತಿದ್ದಾರೆ.

ಮೇಲ್ನೋಟಕ್ಕೆ ಚನ್ನಪಟ್ಟಣ ತಹಸೀಲ್ದಾರ್ ಹೊರತುಪಡಿಸಿ, ಡಿಸಿ, ಎಸಿ ಸೇರಿದಂತೆ ಅಧಿಕಾರಿಗಳು ಯೋಗೇಶ್ವರ್ ಗೆ ಬೇಕಾದವರೇ ಅಂದುಕೊಂಡರೂ, ಯೋಗೇಶ್ವರ್ ವಿರೋಧಿಸುವ ವ್ಯಕ್ತಿಗಳ ಜೊತೆಗೂ ಸೌಜನ್ಯದಿಂದ ಇದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗು ಡಿಸಿಎಂ ಅಶ್ವತ್ಥನಾರಾಯಣ ಅವರ ಸೂಚನೆ ಕಾರಣ ಎಂದು ಹೇಳಲಾಗುತ್ತಿದೆ.

ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ತನ್ನ ಬೆಂಬಲಿಗರೊಬ್ಬರಿಗೆ ಕೊಡಿಸಿರುವುದನ್ನು ಬಿಟ್ಟರೇ, ಉಳಿದ ಪ್ರಾಧಿಕಾರಗಳೆಲ್ಲ ಕರ್ನಾಟಕ ಇನ್ಪ್ರಾಸ್ಟ್ರಕ್ಚರ್ ಡೆವಲಪ್ ಮೆಂಟ್ ಲಿಮಿಟೆಡ್ ನ ಅಧ್ಯಕ್ಷ ಎಂ. ರುದ್ರೇಶ್ ಅವರು ಹೇಳಿದಂತೆ ನಡೆದಿದೆ. ಇದರಿಂದಾಗಿ ಮಾಗಡಿ ರಾಮನಗರ ಮತ್ತು ಕನಕಪುರದಲ್ಲಿ ಯೋಗೇಶ್ವರ್ ಗೆ ಹಿಡಿತವಿಲ್ಲದಂತಾಗಿದೆ.

ಉಳಿದಂತೆ ಚನ್ನಪಟ್ಟಣದ ಬಿಜೆಪಿ ಘಟಕವು ಸೇರಿದಂತೆ ಜಿಲ್ಲಾ ಮತ್ತು ಉಳಿದ ತಾಲೂಕು ಘಟಕಗಳು ತೊರ್ಪಡಿಕೆಗಷ್ಟೆ ಯೋಗೇಶ್ವರ್ ಜೊತೆಗಿದ್ದಾರೆ.

ಸಚಿವರಾದ ತರುವಾಯ ಯೋಗೇಶ್ವರ್ ಚನ್ನಪಟ್ಟಣದ ಕಾರ್ಯಕ್ರಮಗಳನ್ನು ಹೊರತು ಪಡಿಸಿದರೇ ಉಳಿದ ತಾಲೂಕುಗಳ ವೇದಿಕೆಗಳಲ್ಲಿ ಹೆಚ್ಚಾಗಿಯೂ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಅಲ್ಲಿ ತಮ್ಮ ಬೆಂಬಲಿಗರಿಗಿಂತ ತಮ್ಮ ಸ್ವಪಕ್ಷದ ವಿರೋಧಿಗಳ ಬೆಂಬಲಿಗರೇ ವಿಜೃಂಭಿಸುತ್ತಿರುವುದು.

ಒಟ್ಟಾರೆ, ಸಿಎಂ ಯಡಿಯೂರಪ್ಪ ಅವರನ್ನೇ ನಿಷ್ಠುರ ಮಾಡಿಕೊಂಡಿರುವ ಯೋಗೇಶ್ವರ್ ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜೊತೆಗೆ ಸ್ವಪಕ್ಷೀಯ ಮುಖಂಡರೇ ಮಗ್ಗುಲ ಮುಳ್ಳಾಗಿ ಕಾಡ ತೋಡಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button