ಉತ್ತರ ಕನ್ನಡಜಿಲ್ಲಾ ಸುದ್ದಿ

ವಿಶ್ವವಿದ್ಯಾಲಯಕ್ಕೆ ಪ್ರಥಮ; ಚಿನ್ನದ ಪದಕ ಪಡೆದ ಹೊನ್ನಾವರದ ಮೇಘಾ ಗೌಡ

ಕಾರವಾರ : ಹೊನ್ನಾವರ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆ ಮೇಘಾ ಗೌಡ ಬಂಗಾರದ ಪದಕ ಪಡೆದಿದ್ದಾರೆ.

ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಕೆಲವರ ಮೊಂಡು ವಾದಕ್ಕೆ ಬೆರಗಾಗುವ ರೀತಿಯಲ್ಲಿ ಬಡತನದ ಮಧ್ಯೆ ಏನಾದರೂ ಸಾಧಿಸಲೇಬೇಕೆಂಬ ತುಡಿತದಿಂದ ಆರಂಭದಿಂದಲೂ ಅಧ್ಯಯನದಲ್ಲಿ ತೊಡಗಿಕೊಂಡಿದ್ದರು.ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂತೇಗುಳಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಎಸ್‌.ಕೆ.ಪಿ. ಅರೇಅಂಗಡಿ,ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಅಧ್ಯಯನ ನಡೆಸಿದ್ದಾರೆ.

ಮೂಲತ: ಹೊನ್ನಾವರ ತಾಲೂಕಿನ ಹೊಸಾಕುಳಿಯ ಮಕ್ಕಿಗದ್ದೆಯ ಸೀಮಾ ಹಾಗೂ ಮಾಸ್ತಿಗೌಡ ಅವರ ಪುತ್ರಿಯಾದ ಮೇಘಾ ಅವರು ಎಂ.ಎ.ಅಂತಿಮ ವರ್ಷದಲ್ಲಿರುವಾಗ ನೆರೆಯ ಕುಮಟಾ ತಾಲೂಕಿನ ಅಘನಾಶಿನಿಯ ರಾಘವೇಂದ್ರ ಗೌಡ ಅವರೊಡನೆ ವಿವಾಹವಾಗಿದ್ದರು. ತಮ್ಮ ನೆಚ್ಚಿನ ವಿಷಯವಾದ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ. ಮಾಡಲು ಆಯ್ಕೆ ಮಾಡಿಕೊಂಡು ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮೇಘಾ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಉಪನ್ಯಾಸಕ ಪ್ರೊ.ನಾಗೇಶ ಶೆಟ್ಟಿ, ಉಪನ್ಯಾಸಕಿ ಸುಜಾತ, ಶಿಲ್ಪಾ ಅವರ ಮಾರ್ಗದರ್ಶನ ಹಾಗೂ ಕಾಲೇಜಿನ ಇತರೆ ಉಪನ್ಯಾಸಕರು ಹಾಗೂ ಕುಟುಂಬದವರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇವರ ಸಾಧನೆಗೆ ಶಾಸಕ ದಿನಕರ ಶೆಟ್ಟಿ,ಜಿಲ್ಲಾ ಪಂಚಾಯತ್‌ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಕಾಲೇಜಿನ ಪ್ರಾಚಾರ್ಯರು ಅಭಿನಂದಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button