ತೆಲುಗುನಾಡಲ್ಲಿ ಚುನಾವಣಾ ಕಣಕ್ಕೆ ಪ್ರಕಾಶ್ ರೈ!

ಪೂರ್ಣ ವಿ-ರಾಮ
ಕಾಂಟ್ರಾವರ್ಸಿ ಕಿಂಗ್, ಮಾತಿನ ಮಲ್ಲ ಪ್ರಕಾಶ್ ರೈ ಆಂಧ್ರದಲ್ಲಿ ಎಲೆಕ್ಷನ್ಗೆ ನಿಲ್ಲುತ್ತಿದ್ದಾರೆ. ಮಲಯಾಳಂ ಹೊರತಾಗಿ ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ಹೆವೀ ಸೌಂಡ್ ಮಾಡುತ್ತಿರೋ ಜಗಳ ಆಡುತ್ತಲೇ ತೆಲುಗು ಚಿತ್ರರಂಗದಲ್ಲಿ ಮೆರೆಯುತ್ತಿರೋ ಹುಟ್ಟು ಕನ್ನಡ ಪ್ರತಿಭೆ ಅಂದರೆ ಅದು ಪ್ರಕಾಶ್ ರೈ.
ಅದೇ ಪ್ರಕಾಶ್ ರೈ ಇದೀಗ ಆಂಧ್ರ ನಾಡಿನಲ್ಲಿ ಎಲೆಕ್ಷನ್ಗೆ ನಿಲ್ಲುತ್ತಿದ್ದಾರೆ. ಹಾಗಂತ ಅವರು ನಿಲ್ಲುತ್ತಿರುವುದು ರಾಜಕೀಯ ಪಕ್ಷದಿಂದ ಅಂದುಕೊಳ್ಳಬೇಡಿ. ಅಲ್ಲ, ಅವರು ಚುನಾವಣಾ ಕಣಕ್ಕೆ ಇಳಿಯುತ್ತಿರುವುದು ಆರ್ಟಿಸ್ಟ್ ಅಸೋಷಿಯೇಷನ್ ಅಖಾಡದಲ್ಲಿ!
ಹೌದು, ತೆಲುಗು ಚಿತ್ರರಂಗದಲ್ಲಿ ಪ್ರಕಾಶ್ ರೈ ಒಂದಷ್ಟು ವಿಷಯಕ್ಕೆ ಜಗಳ ಆಡಿದ್ದಾರೆ. ಒಮ್ಮೆಯಂತೂ ಅವರನ್ನು ಬ್ಯಾನ್ ಮಾಡಿದ್ದೂ ಇದೆ. ಆದರೂ ಅದ್ಯಾಕೋ ರೈ ಎಂದರೆ ಕೆಲ ಚಿತ್ರಕ್ಕೆ ಅನಿವಾರ್ಯ. ಕೆಲ ಪಾತ್ರಕ್ಕೆ ಅತ್ಯಗತ್ಯ. ಅವರಿಗೆ ರೀಪ್ಲೇಸ್ ಮೆಂಟೇ ಇಲ್ಲ ಎನ್ನುವ ಮಟ್ಟಕ್ಕೆ ಅಲ್ಲಿ ಕಚ್ಚಿಕೊಂಡುಬಿಟ್ಟಿದ್ದಾರೆ. ಕೆಕ್ಕರಿಸಿ ಕೆಂಗಣ್ಣಿನಿAದ ನೋಡುವ ಪಾತ್ರ ಅಂತ ಹೆಣೆದಾಗ ಅದಕ್ಕೆ ಪ್ರಕಾಶ್ ರೈ ಅವರೇ ಬೇಕು ಎಂದು ಕೆಲ ನಿರ್ದೇಶಕರು ಹಠ ಹಿಡಿಯುತ್ತಾರೆ. ಮಹೇಶ್ ಬಾಬು ಥರದ ಟಾಪ್ ಸ್ಟಾರ್ಗಳು ಪ್ರಕಾಶ್ ರಾಜ್ ಅವರೇ ಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಬ್ಯಾನ್ ಆಗಿದ್ದರೂ ಅವರನ್ನು ಮತ್ತೆ ಕರೆಸಿ, ಮತ್ತೆ ಪಾತ್ರ ಕೊಟ್ಟ ದಾಖಲೆಗಳಿವೆ. ಅಂಥ ಆಂಧ್ರ ನಾಡಿನ ಕಲಾವಿದರ ಅಸೋಷಿಯೇಷನ್ ಕಣಕ್ಕೆ ಪ್ರಕಾಶ್ ರೈ ಇಳಿಯಲಿದ್ದಾರೆ. ಈ ಸಲದ ಚುನಾವಣೆಯಲ್ಲಿ ನಿಂತು ಸ್ಪರ್ಧೆ ಮಾಡಲಿದ್ದಾರೆ!
ಸಿಗಲಿದೆಯಾ ಮೆಗಾಸ್ಟಾರ್ ಕಡೆಯಿಂದ ಸಾಥ್?!?
ಒಂದು ಮೂಲದ ಮಾಹಿತಿಯ ಪ್ರಕಾರ ಪ್ರಕಾಶ್ ರೈ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಖಾಂದಾನ್ ಕಡೆಯಿಂದ ಪ್ರಕಾಶ್ ರೈಗೆ ಸಪೋರ್ಟ್ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಪ್ರತಿಷ್ಟಿತ ಕಲಾವಿದರ ಅಸೋಸಿಯೇಷನ್ ಕಡೆಯಿಂದ ನಡೆಯುವ ಎಲೆಕ್ಷನ್ಗೆ ನಿಲ್ಲಲು ಅವರದ್ದೇ ಆದ ತಾಕತ್ತು ಧೈರ್ಯ ಬೇಕು. ಒಂದಷ್ಟು ಸಾಮಾಜಿಕ ಕರ್ಯಗಳಲ್ಲಿ ತೊಡಗಿಕೊಂಡಿರುವ ಪ್ರಕಾಶ್ ರಾಜ್ ಅಲಿಯಾಸ್ ಪ್ರಕಾಶ್ ರೈ ಅಲಿಯಾಸ್ ಅದೇ ಸೇಮ್ ಓಲ್ಡ್ ರವಿಂದ್ರ ಕಲಾಕ್ಷೇತ್ರದ ಸುತ್ತ ಗಸ್ತು ತಿರುಗುತ್ತಿದ್ದ ಪ್ರಕಾಶ ಇದೀಗ ತೆಲುಗು ನಾಡಿನ ಕಲಾವಿದರ ಸಂಘದ ಚುನಾವಣೆಯಲ್ಲಿ ನಿಲ್ಲಲು ಹೊರಟಿದ್ದಾರೆ ಎಂದರೆ ಖಂಡಿತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಪ್ರಕಾಶ್ ರೈ ಕಾಂಗ್ರೆಸ್ ಪರ, ಆರ್ಎಸ್ಎಸ್ ವಿರೋಧಿ ಇತ್ಯಾದಿ ಏನೇ ವಿಷಯಗಳು ವಿನಿಮಯಗೊಳ್ಳುತ್ತಿದ್ದರೂ ಅವರಲ್ಲೊಬ್ಬ ಹುಟ್ಟು ಮಾನವತಾವಾದಿ ಇದ್ದಾನೆ. ಮನುಷ್ಯತ್ವ ತುಂಬಿದ ಹೃದಯವಂತ ಇದ್ದಾನೆ. ಅದೆಲ್ಲದರ ಜೊತೆಗೆ ಒಬ್ಬ ಖಡಕ್ ಕಲಾವಿದ ನೆಲೆನಿಂತಿದ್ದಾನೆ. ಪಾತ್ರಪರಕಾಯ ಪ್ರವೇಶ ಮಾಡುವ ಮೂಲಕ ಪ್ರಕಾಶ್ ರೈ ಇವತ್ತು ದೇಶವೇ ಮೆಚ್ಚಿದ ಕಲಾವಿದ ಎನಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲೂ ತಮ್ಮದೇ ಆದ ಫೇಸ್ ವ್ಯಾಲ್ಯೂ ಹೊಂದಿದ್ದಾರೆ. ಸಿನೆಮಾ ಜೊತೆಜೊತೆಗೆ ಸಮಾಜಸೇವೆಯಲ್ಲೂ ತೊಡಗಿಕೊಂಡಿದ್ದಾರೆ. ಈ ನಡುವೆ ಕಲಾವಿದರ ಸಂಘದ ಎಲೆಕ್ಷನ್ ಕಡೆ ಕೂಡ ಚಿತ್ತ ಹರಿಸಿದ್ದಾರೆ. ಅಲ್ಲಿ ಹೋಗಿ ಗೆಲ್ಲುತ್ತಾರಾ? ಗೆದ್ದರೆ ಸಂತೋಷ…ಸೋತರೆ ಸೋಲೇ ಗೆಲುವಿನ ಸೋಪಾನ!




