Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಹರಿಹರದ ತುಂಗಾಭದ್ರಾ ನದಿ ತಟದಲ್ಲಿ 30 ಕೋಟಿ ರೂ. ವೆಚ್ಚದ ಕಾಮಗಾರಿಗೆ ನಾಳೆ ಸಿಎಂ ಚಾಲನೆ

ದಾವಣಗೆರೆ: ಕಾಶಿಯಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಹರಿದು ಹೋಗುವ ತುಂಗಾಭದ್ರಾ ನದಿಯಲ್ಲಿ ಆರತಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.

ಈ ಸಂಬಂಧ 30 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಫೆಬ್ರವರಿ 20ರ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಪಂಚಮಸಾಲಿ ಲಿಂಗಾಯತ ಸಮಾಜದ ಹರಿಹರ ಕ್ಷೇತ್ರದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಈ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ತುಂಗಾಭದ್ರಾ ಆರತಿ ಸಂಬಂಧ ಹಮ್ಮಿಕೊಂಡಿದ್ದ ಕಾರ್ಯಕ್ರಮ ಮುಂದೂಡಲಾಗಿತ್ತು. ಈ ಸಮಾರಂಭಕ್ಕೆ ಬರಲು ಆಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಸಹ ಒಪ್ಪಿದ್ದರು. ಕೊರೊನಾ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು. ಈಗ ಕೊರೊನಾ ಹಾಗೂ ಒಮಿಕ್ರಾನ್ ಆರ್ಭಟ ಕಡಿಮೆಯಾದ ಹಿನ್ನೆಲೆಯಲ್ಲಿ ನಾಳೆ ಈ ಕಾರ್ಯಕ್ರಮ ನಡೆಯಲಿದೆ. ಕೋವಿಡ್ ಮಾರ್ಗಸೂಚಿ ಪಾಲಿಸಿ ಈ ಕಾರ್ಯಕ್ರಮ ನಡೆಸಲಾಗುವುದು. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರೂ ಸಹ ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರಕಾಪಾಡಿಕೊಂಡು ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯಕ್ರಮ ನಡೆಸಲಾಗುವುದು ಎಂದು
ಸಂಘಟಕರು ಮಾಹಿತಿ ನೀಡಿದ್ದಾರೆ.

ಗಂಗಾರತಿ ಮಾದರಿಯಲ್ಲಿ ದಕ್ಷಿಣ ಭಾರತದ ಹರಕ್ಷೇತ್ರ ಹರಿಹರದಲ್ಲಿ ನಿರ್ಮಿಸಲು ಯೋಜಿಸಿರುವ ತುಂಗಾಭದ್ರಾ ಆರತಿ ಮಂಟಪಗಳ ಉದ್ಘಾಟನಾ ಕಾರ್ಯವನ್ನು ಸಿಎಂ ಬಸವರಾಜ್ ಬೊಮ್ಮಾಯಿ ನೆರವೇರಿಸಲಿದ್ದಾರೆ. ಈ ತುಂಗಭದ್ರಾ ಆರತಿ ಮಂಟಪಗಳ ನೀಲಿ ನಕ್ಷೆಯ ಬಗ್ಗೆ ಈ ಹಿಂದೆಯೇ ಹರಕ್ಷೇತ್ರ ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷ ವಚನಾನಂದ ಮಹಾಸ್ವಾಮಿಗಳು ಹಾಗೂ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಮಾಹಿತಿ ನೀಡಿದ್ದರು. ಇತ್ತೀಚೆಗೆ ಕಾಶಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ತಾವು ಕಾಶಿಯಲ್ಲಿ ನೋಡಿದ ಗಂಗಾ ಆರತಿಯ ಕೆಲ ಅಂಶಗಳನ್ನು ಈ ಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು.

ಇಂದು ರಾತ್ರಿ ದಾವಣಗೆರೆಗೆ ಸಿಎಂ:

ಬಸವರಾಜ ಬೊಮ್ಮಾಯಿ ಇವರು ಫೆ.19 ಹಾಗೂ 20 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.19 ರ ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 7.30ಕ್ಕೆ ದಾವಣಗೆರೆಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.

ಫೆ.20 ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯಿಂದ ಹೊರಟು 10,20ಕ್ಕೆ ಹರಿಹರದ ಪಂಚಮಶಾಲಿ ಪೀಠದಿಂದ ಆಯೋಜಿಸಿರುವ ತುಂಗಭದ್ರಾ ಆರತಿ ಪ್ರಯುಕ್ತ 108 ಯೋಗ ಮಂಟಪಗಳಿಗೆ ಶಿಲಾನ್ಯಾಸ ಮತ್ತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12. 30 ಕ್ಕೆ ಹರಿಹರದಿಂದ ಹೊರಟು ದಾವಣಗೆರೆಯ ಎಸ್.ಎಸ್.ಕನ್ವೆನ್ಷನ್ ಹಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 3.30 ಕ್ಕೆ ದಾವಣಗೆರೆಯಿಂದ ಹೊರಟು ಬೆಂಗಳೂರು ತಲುಪಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸ್ವಚ್ಛತಾ ಕಾರ್ಯ:

ಇನ್ನು ಹರಿಹರ ಪಟ್ಟಣದಲ್ಲಿ ಹಾದು ಹೋಗುವ ತುಂಗಾಭದ್ರಾ ನದಿ ತೀರದಲ್ಲಿ ಸ್ವಚ್ಛತಾ ಕಾರ್ಯವನ್ನು ವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾಡಲಾಯಿತು. ಸಂಸದ ಜಿ. ಎಂ. ಸಿದ್ದೇಶ್ವರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ತುಂಗಾಭದ್ರಾ ನದಿಯಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುವುದರಿಂದ ಮಲಿನಗೊಂಡಿದೆ. ಈ ಹಿನ್ನೆಲೆಯಲ್ಲಿ ಕಸ ಸೇರಿದಂತೆ ತ್ಯಾಜ್ಯ ತೆಗೆಯುವ ಕಾರ್ಯವನ್ನು ನೆರವೇರಿಸಲಾಯಿತು. ಪ್ರತಿ ಭಾನುವಾರವೂ ಸಹ ಈ ಕಾರ್ಯಕ್ರಮ ನಡೆಯುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button