ಹಿಂದೆಂದೂ ಕೇಳರಿಯದ ಭಾರಿ ಬ್ಯಾಂಕ್ ವಂಚನೆ ಪ್ರಕರಣ ಬಹಿರಂಗ: ಸಿಬಿಐ ತನಿಖೆ

ನವದೆಹಲಿ: ದೇಶದಲ್ಲಿ ಅತಿದೊಡ್ಡದು ಎನ್ನಲಾದ ಶಿಪ್ ಯಾರ್ಡ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬಿಜಿ ಶಿಫ್ ಯಾರ್ಡ್ ನ 28 ಬ್ಯಾಂಕ್ ಗಳಿಗೆ 22,824 ಸಾವಿರ ಕೋಟಿ ರೂಪಾಯಿಗಳ ಭಾರಿ ಮೊತ್ತದ ವಂಚನೆಯಾಗಿದೆ ಎಂದು ಸಿಬಿಐಯಲ್ಲಿ ದೂರು ದಾಖಲಾಗಿದೆ.
ಬಿಜೆಪಿ ಆಡಳಿತದ ಗುಜರಾತ್ ನಲ್ಲಿ ಪ್ರಕರಣ ನಡೆದಿರುವುದು ಗಮನಾರ್ಹ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಬಿಐ ದೂರಿನ ಮೇರೆಗೆ ಸಿಬಿಐ ಎಫ್ ಐ ಆರ್ ದಾಖಲಿಸಿದೆ. ಹಡಗು ನಿರ್ಮಾಣ ಹಾಗೂ ದುರಸ್ತಿಯಲ್ಲಿ ತೊಡಗಿರುವ ಸಂಸ್ಥೆಯೊಂದಿಗೆ ಅದರ ನಿರ್ದೇಶಕರಾದ ರಿಷಿ ಅಗರ್ವಾಲ್, ಸಂತಾನಂ ಮುತ್ತುಸ್ವಾಮಿ ಮತ್ತು ಅಶ್ವಿನಿ ಕುಮಾರ್ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದ್ದು, ಸಿಬಿಐ ತನಿಖೆ ನಡೆಸಲಿರುವ ಬ್ಯಾಂಕ್ ವಂಚನೆಯ ಅತಿದೊಡ್ಡ ಪ್ರಕರಣ ಇದಾಗಿದೆ.
ದೂರಿನಲ್ಲಿ ಉಲ್ಲೇಖಿಸಿರುವಂತೆ, ಆರೋಪಿಗಳು 2012ರಿಂದ ಜುಲೈ 2017ರವರೆಗೆ ಪರಸ್ಪರ ಒಪ್ಪಂದ ಮಾಡಿಕೊಂಡು ಹಣವನ್ನು ಬೇರೆಡೆ ವಿನಿಯೋಗ, ದುರುಪಯೋಗ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ಫೊರೆನ್ಸಿಕ್ ಆಡಿಟ್ ವರದಿಯಿಂದ ವಿಷಯ ಬಹಿರಂಗವಾಗಿದೆ ಎಂದು ತಿಳಿಸಲಾಗಿದೆ.
