ಪಶ್ಚಿಮ ಘಟ್ಟಗಳ ದಟ್ಟಾರಣ್ಯದಲ್ಲಿ ಅಕ್ರಮ ನಡೀತಿದೆ ಕೆಂಪು ಕಲ್ಲು ಗಣಿಗಾರಿಕೆ

ಕೊಡಗು : ಪುಷ್ಪ ಸಿನಿಮಾ ರೀತಿಯಲ್ಲೇ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ದಂಧೆಯೊಂದು ಕಾರ್ಯನಿರ್ವಹಿಸುತ್ತಿದೆ. ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಕೆಂಪು ಹರಳು ಕಲ್ಲು ದಂಧೆ ಸದ್ದಿಲ್ಲದೇ ನಡೆಯುತ್ತಿದೆ.
ಬ್ರಿಟಿಷರು ಈ ಬೆಟ್ಟವನ್ನು ರೆಡ್ ಸ್ಟೋನ್ ವ್ಯಾಲಿ ಅಂತಾ ಕರೆಯುತ್ತಿದ್ದರು.ಮಹಿಳೆಯರ ಆಭರಣ, ವಿವಿಧ ಮಾದರಿಯ ಉಂಗುರುಗಳಿಗೆ ಬಳಸುವ ಈ ಕೆಂಪು ಹೊಳೆಯುವ ಕಲ್ಲಿಗಾಗಿ ಅಕ್ರಮ ದಂಧೆಕೋರರು ಹುಡುಕಾಟ ನಡೆಸುತ್ತಿದ್ದು, ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ದಶಕಗಳ ಹಿಂದೆ ನಿಂತೂ ಹೋಗಿದ್ದ ಹರಳು ಕಲ್ಲಿನ ಗಣಿಗಾರಿಕೆ ಮತ್ತೆ ಆರಂಭಗೊಂಡಿದೆ.
ಕಳೆದ ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್ ಮಲೆ ಎಂಬ ಬೆಟ್ಟಗಳಲ್ಲಿ ಕೆಂಪು ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಆಗ ಕೆಜಿಯೊಂದಕ್ಕೆ 500 ರೂಪಾಯಿ ಇಂದ ಆರಂಭವಾಗಿ ಸಾವಿರಾರು ರೂಪಾಯಿ ಬೆಲೆ ದೊರೆಯುತ್ತಿತ್ತು.ಆದರೆ ಈಗ ಈ ಹರಳು ಕಲ್ಲಿಗೆ ರಾಜಸ್ಥಾನ , ಗುಜರಾತ್, ಮುಂಬೈ ಆಭರಣ ತಯಾರಿಕರಿಂದ ಭಾರೀ ಬೇಡಿಕೆ ಇದೆ.
ಮಾಹಿತಿಯ ಪ್ರಕಾರ, ಈ ಹರಳು ಕಲ್ಲಿಗೆ ಪ್ರಸ್ತುತ 1 ಕೆಜಿಗೆ 30 ರಿಂದ 40 ಸಾವಿರ ರೂಪಾಯಿ ಇದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟದ ತುದಿಯಲ್ಲಿ ರಾತ್ರೋರಾತ್ರಿ ಹೊಳೆಯುವ ಹರಳು ಕಲ್ಲಿಗಾಗಿ ಸುರಂಗ ತೋಡುವ ಕಾರ್ಯ ಶುರುವಾಗಿದೆ.
ದಶಕಗಳ ಬಳಿಕ ಮತ್ತೆ ಈ ಭಾಗದಲ್ಲಿ ಹರಳುಕಲ್ಲು ಗಣಿಗಾರಿಕೆ ಆರಂಭವಾಗಿದೆ.ಅತೀ ಬೇಗ ಶ್ರೀಮಂತರಾಗುವ ಭಯಕೆಯಿಂದ ಈ ಹರಳು ಕಲ್ಲು ತೆಗೆಯಲು ಕೊಡಗು ಭಾಗದಿಂದ ತಂಡಗಳು ಬರುತ್ತಿವೆ ಎಂದು ಹೇಳಲಾಗಿದೆ. ಹಣದ ಆಸೆಗೆ ಕಾರ್ಮಿಕರು ಗುಡ್ಡದಲ್ಲಿ ಅಪಾಯಕಾರಿ ಸುರಂಗ ಕೊರೆದು ಹೊಳೆಯುವ ಕಲ್ಲುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಹಿಂದೆ ಪಶ್ಚಿಮ ಘಟ್ಟಗಳ ಅಧ್ಯಕ್ಷರಾದ ರವಿ ಕುಶಾಲಪ್ಪನವರು ಇಲ್ಲಿಗೆ ಭೇಟಿ ನೀಡಿ ಅಕ್ರಮ ಕಲ್ಲು ಗಣಿಕಾರಿಕೆ ತಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ನಂತರದ ಕೆಲವು ದಿನಗಳಲ್ಲಿ ಒಂದಿಬ್ಬರು ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರೂ ಅಕ್ರಮ ಗಣಿಗಾರಿಕೆ ಮಾತ್ರ ಸದ್ದಿಲ್ಲದೆ ಅರಣ್ಯದ ಒಳಗೆ ಎಗ್ಗಿಲ್ಲದೇ ನಡೆಯುತ್ತಿರುವುದು ವಿಪರ್ಯಾಸ.



