ಶೃಂಗೇರಿ ತಹಶೀಲ್ದಾರ್ ಅಂಬುಜಾ ಅಮಾನತು

ಚಿಕ್ಕಮಗಳೂರು: ಅಕ್ರಮ ಸಕ್ರಮ ಹಕ್ಕುಪತ್ರ ವಿತರಣೆ ವಿವಾದದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದ ಶೃಂಗೇರಿ ತಹಶೀಲ್ದಾರ್ ಅಂಬುಜಾ ಅಮಾನತುಗೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಕಳುಹಿಸಿದ ವರದಿ ಆಧರಿಸಿ ಅಮಾನತು ಮಾಡುವಂತೆ ಆದೇಶಿಸಿದೆ.
ಬೇಜವಾಬ್ದಾರಿತನ, ದುರ್ನಡತೆ, ಕರ್ತವ್ಯಲೋಪ ಆರೋಪದ ಮೇಲೆ ವಿಚಾರಣೆ ಕಾಯ್ದಿರಿಸಿ ಅಂಬುಜಾ ಅವರನ್ನು ಅಮಾನತುಗೊಳಿಸಲಾಗಿದೆ. ತಹಶೀಲ್ದಾರ್ ಅವರನ್ನು ವರ್ಗಾ ಮಾಡುವಂತೆ ಪತ್ರ ಬರೆದಿದ್ದ ಶಾಸಕ ಟಿ ಡಿ ರಾಜೇಗೌಡ ನಂತರ ರಾಜಕೀಯ ಒತ್ತಡಕ್ಕೆ ಮಣಿದು ಯೂ ಟರ್ನ್ ಹೊಡೆದಿದ್ದರು. ಅಂಬುಜಾ ಪರ ಸರ್ವಪಕ್ಷ ಪ್ರತಿನಿಧಿಗಳು, ಕೆಲ ಬ್ರೋಕರ್ ಗಳು ಬ್ಯಾಟಿಂಗ್ ಮಾಡಿದ್ದರು. ಅಂಬುಜಾ ಅವಧಿಯಲ್ಲಿ ನೀಡಿದ ಹಕ್ಕುಪತ್ರಗಳು ಬೋಗಸ್ ಎನ್ನುವುದು ಈಗಾಗಲೇ ಮೇಲ್ನೋಟಕ್ಕೆ ಸಾಬೀತಾಗಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
ಆರು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಸರಿಯಾದ ಸಾಕ್ಷಾಧಾರಗಳು ಸಿಕ್ಕಿದ ಬಳಿಕವೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.



